ವಿಜಯಪುರ: ಪುಸ್ತಕ ಪರಿಷ್ಕರಣೆ ಹಿಂದೆ ಇರೋದೇ ಸಚಿವ ಬಿ ಸಿ ನಾಗೇಶ್, ಅವರು ಮಾಡುತ್ತಿರುವ ತಪ್ಪನ್ನು ಸರ್ಕಾರ ಮುಚ್ಚಿಕೊಳ್ಳುತ್ತಿದೆ ಎಂದು ರಾಜ್ಯದಲ್ಲಿ ಪಠ್ಯ ಪರಿಷ್ಕರಣೆ ವಿವಾದ ವಿಚಾರ ಕುರಿತು ಮಾಜಿ ಸಿಎಂ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಜಿಲ್ಲೆಯ ದೇವರ ಹಿಪ್ಪರಗಿಯಲ್ಲಿ ಮಾತನಾಡಿದ ಅವರು, ರೋಹಿತ್ ಚಕ್ರತೀರ್ಥ ಬಂಧನ ಆಗಬೇಕು. ಇದರ ಜತೆ ಸಚಿವ ಬಿ. ಸಿ. ನಾಗೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಮಹಾನ್ ವ್ಯಕ್ತಿಗಳಿಗೆ ಅಪಮಾನ ಮಾಡಿದ್ದಾರೆ, ಇವರು ದೇಶ ಆಳೋಕೆ ಅಯೋಗ್ಯರು ಎಂದು ಗರಂ ಆದ ಸಿದ್ದರಾಮಯ್ಯ ಅವರು ರೋಹಿತ್ ಚಕ್ರತೀರ್ಥ ತಿರುಚಿದ ಪಠ್ಯವನ್ನು ಮಕ್ಕಳಿಗೆ ಬೋಧಿಸಬಾರದು. ಈ ಪಠ್ಯವನ್ನ ತಿರಸ್ಕರಿಸಬೇಕೆಂದರು.
ಕೇಸರಿಕರಣ ಮಾಡೋದಕ್ಕೆ ಪಠ್ಯ ಪರಿಷ್ಕರಣೆ ಮಾಡಲಾಗುತ್ತಿದೆ. ಚರಿತ್ರೆ ತಿರುಚಿದ ಪಠ್ಯ ಇದಾಗಿದೆ, ಮಕ್ಕಳಿಗೆ ವೈಚಾರಿಕ, ವೈಜ್ಞಾನಿಕ ಜ್ಞಾನ ಕೊಡಬೇಕೆ ಹೊರತು ಅದನ್ನು ಬದಲಿಸುವ ಸಾಹಸಕ್ಕೆ ಕೈ ಹಾಕಬಾರದು. ಕುವೆಂಪು, ಅಂಬೇಡ್ಕರ್, ಬಸವಣ್ಣ, ನಾರಾಯಣ ಗುರು, ಬಾಲಗಂಗಾಧರ ಸ್ವಾಮೀಜಿ, ಸಿದ್ದಗಂಗಾ ಶ್ರೀಗಳಿಗೆ ಪಠ್ಯದಲ್ಲಿ ಅಪಮಾನವಾಗಿದೆ ಎಂದು ಹರಿಹಾಯ್ದರು.
ಸಿ.ಟಿ. ರವಿಗೆ ಟಾಂಗ್: ಟಿಪ್ಪು ಸುಲ್ತಾನ್ ಮೇಲೆ ಸಿದ್ದರಾಮಯ್ಯಗೆ ಮಾತ್ರ ಪ್ರೀತಿ ಎಂಬ ಸಿ ಟಿ ರವಿ ಹೇಳಿಕೆ ವಿಚಾರವಾಗಿ ಖಾರವಾಗಿ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಕಿತ್ತೂರು ರಾಣಿ ಚೆನ್ನಮ್ಮ, ಕೆಂಪೇಗೌಡ ಜಯಂತಿ ಮಾಡಿದ್ದು ನಾನು, ಅವರ ಮೇಲೆ ಪ್ರೀತಿ ಇಲ್ವಾ?. ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಫೋಟೋ ಹಾಕಿದ್ದೇವೆ, ಹಾಗಾದ್ರೆ ಪ್ರೀತಿ ಇಲ್ವಾ?. ಇದನ್ನೆಲ್ಲ ಇವರು ಮಾಡಿದ್ದಾರಾ ಎಂದು ಪ್ರಶ್ನಿಸಿದರು.
ಮೋದಿಗೆ ವೆಲ್ ಕಮ್ : ವಿಶ್ವ ಯೋಗ ದಿನಾಚರಣೆ ಹಿನ್ನೆಲೆ ಮೈಸೂರಿಗೆ ಪ್ರಧಾನಿ ಮೋದಿ ಆಗಮನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ಮೋದಿ ದೇಶದ ಪ್ರಧಾನಿ ಮೈಸೂರಿಗೆ ಬರೋದರಲ್ಲಿ ತಪ್ಪಿಲ್ಲ, ಬರಬೇಡ ಅಂತ ಹೇಳೋಕೆ ಆಗುತ್ತಾ? ದೇಶದ ಪ್ರಧಾನಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸುತ್ತಾರೆ. ರಾಜಕೀಯ ಕೂಡಾ ಮಾಡಲಿಕ್ಕೆ ಬರ್ತಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ಪ್ರತಿಭಟನೆ ವೇಳೆ ಜನ ಸೇರಿದಾಗ ಕೊರೊನಾ ಬರುತ್ತೆ ಎಂಬ ವಿಚಾರಕ್ಕೆ ವ್ಯಂಗವಾಡಿದ ಸಿದ್ದರಾಮಯ್ಯ, ನಿನ್ನೆ ನಡ್ಡಾ ಬಂದಿದ್ದರು ಅವರು ಸಾರ್ವಜನಿಕ ಸಭೆ ಮಾಡಿದ್ದರು, ಅಲ್ಲೂ ಕೂಡಾ ಜನ ಸೇರಿದ್ದರು. ನರೇಂದ್ರ ಮೋದಿ ಅವರು ಬಂದಾಗ ಸಹ ಜನ ಸೇರುತ್ತಾರೆ. ಮೈಸೂರಿನಲ್ಲಿ 10 ಸಾವಿರ ಜನ ಸೇರುತ್ತಾರೆ. ಅಲ್ಲಿ ಕೊರೊನಾ ಬರಲ್ವಾ, ನರೇಂದ್ರ ಮೋದಿ ಕಂಡು ಕೊರೊನಾ ಓಡಿಹೋಗುತ್ತಾ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ವಿಷಾಹಾರ ಸೇವನೆ: ಕುಟುಂಬದ ಇಬ್ಬರು ಮಕ್ಕಳ ಸಾವು, ಮತ್ತಿಬ್ಬರ ಸ್ಥಿತಿ ಗಂಭೀರ