ಮುದ್ದೇಬಿಹಾಳ (ವಿಜಯಪುರ): ಮಹಾರಾಷ್ಟ್ರದಿಂದ ಬಂದ ವಲಸೆ ಕಾರ್ಮಿಕರಿಂದ ಮುದ್ದೇಬಿಹಾಳದಲ್ಲಿ ಇಂದು ಒಂದೇ ದಿನ 18 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.
ಮುದ್ದೇಬಿಹಾಳ ತಾಲೂಕಿನ ಕಾಳಗಿ ಎಲ್.ಟಿಯಲ್ಲಿ ಎರಡು, ಚಿರ್ಚನಕಲ್, ಬಸರಕೋಡದಲ್ಲಿ ತಲಾ ಒಂದು ಹಾಗೂ ತಾಳಿಕೋಟೆ ವ್ಯಾಪ್ತಿಯಲ್ಲಿ 14 ಕೇಸ್‌ಗಳು ಪತ್ತೆಯಾಗಿವೆ. ಸಾಂಸ್ಥಿಕ ಕ್ವಾರಂಟೈನ್ ಪೂರ್ಣಗೊಳಿಸಿ ಹೋಮ್ ಕ್ವಾರಂಟೈನ್ನಲ್ಲಿದ್ದರಲ್ಲಿ ಸೋಂಕು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಇವರೆಲ್ಲರಿಗೂ ವಿಜಯಪುರ ಜಿಲ್ಲಾಸ್ಪತ್ರೆಯ ಕೋವಿಡ್-19 ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.
ಮುದ್ದೇಬಿಹಾಳ ತಾಲೂಕಿನ ಬಸರಕೋಡದಲ್ಲಿ ತಾಪಂ ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ, ತಹಶೀಲ್ದಾರ್ ಜಿ.ಎಸ್.ಮಳಗಿ, ಸಿಪಿಐ ಆನಂದ ವಾಘಮೋಡೆ, ಪಿಡಿಒ ಸಂಗಯ್ಯ ಹಿರೇಮಠ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಗ್ರಾಮವನ್ನು ಸೀಲ್ ಡೌನ್ ಮಾಡಿಸಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ಎಂಟು ವರ್ಷದ ಬಾಲಕಿಗೂ ಕೊರೊನಾ:
ತಾಲೂಕಿನ ಕಾಳಗಿ ಎಲ್.ಟಿಯಲ್ಲಿ ಎಂಟು ವರ್ಷದ ಬಾಲಕಿಗೂ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ತಾಯಿಯೊಂದಿಗೆ ಸಂಪರ್ಕ ಹೊಂದಿರುವ ಹಿನ್ನೆಲೆ ಮಗುವಿಗೂ ಕೊರೊನಾ ಸೋಂಕು ತಗುಲಿರುವುದು ಗ್ರಾಮೀಣ ಜನರ ನಿದ್ದೆಗೆಡುವಂತೆ ಮಾಡಿದೆ.
ಕಂಟೈನ್ಮೆಂಟ್ ಝೋನ್ :
ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗುತ್ತಲೇ ಯಾವ ಯಾವ ಊರಲ್ಲಿ ಸೋಂಕಿತರು ನೆಲೆಸಿದ್ದರೋ ಅವರ ಮನೆಯಿಂದ 100 ಮೀ. ವ್ಯಾಪ್ತಿಯನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಿ ಸೀಲ್ ಡೌನ್ ಮಾಡಲಾಗಿದೆ ಎಂದು ಸಿಪಿಐ ಆನಂದ ವಾಘಮೋಡೆ ತಿಳಿಸಿದ್ದಾರೆ.