ವಿಜಯಪುರ: ಸಿಂದಗಿ ಉಪಚುನಾವಣೆ ಹತ್ತಿರ ಬರುತ್ತಿದ್ದಂತೆ ಭೀಮಾತೀರದ ಅಪರಾಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ರೌಡಿಗಳನ್ನು ರೌಂಡಪ್ ಮಾಡುವ ಕೆಲಸವನ್ನು ವಿಜಯಪುರ ಜಿಲ್ಲಾ ಪೊಲೀಸರು ಕೈಗೊಂಡಿದ್ದಾರೆ.
ಇಂಡಿ ಡಿವೈಎಸ್ಪಿ ಶ್ರೀಧರ ದೊಡ್ಡಿ ನೇತೃತ್ವದಲ್ಲಿ ಚಡಚಣ ಹಾಗೂ ಆಲಮೇಲದಲ್ಲಿ ರೌಡಿಗಳ ಪರೇಡ್ ನಡೆಸಿದ ಪೊಲೀಸ್ ತಂಡ ಈಗ ದೇವರಹಿಪ್ಪರಗಿಯಲ್ಲಿ ಹಳೇ ರೌಡಿಗಳು ಸೇರಿದಂತೆ ವಿವಿಧ ಅಪರಾಧ ಕೃತ್ಯದಲ್ಲಿ ಸಕ್ರಿಯರಾದವರು, ಅಪರಾಧ ಚಟುವಟಿಕೆಯಿಂದ ದೂರವಿರುವ ಎಲ್ಲರನ್ನು ದೇವರಹಿಪ್ಪರಗಿ ಪೊಲೀಸ್ ಠಾಣೆಗೆ ಕರೆಸಿ ರೌಡಿ ಪರೇಡ್ ನಡೆಸಿದರು.
ಒಟ್ಟು 35 ರೌಡಿ ಶೀಟರ್ಗಳನ್ನು ಪರೇಡ್ಗೆ ಕರೆದು ಅಪರಾಧ ಚಟುವಟಿಕೆಯಲ್ಲಿ ಭಾಗವಹಿಸದಂತೆ ಖಡಕ್ ಎಚ್ಚರಿಕೆ ನೀಡಿದರು. ಸಿಂದಗಿ ಉಪಚುನಾವಣೆ ವೇಳೆ ಸಕ್ರಿಯವಾಗಿರುವುದು ಕಂಡು ಬಂದರೆ ಅಂಥವರ ಮೇಲೆ ಹೊಸ ಫೈಲ್ ಓಪನ್ ಮಾಡಿ ಶಿಕ್ಷೆಗೆ ಗುರಿಪಡಿಸಲಾಗುವದು ಎಂದು ಎಚ್ಚರಿಕೆ ನೀಡಿದರು.
ರೌಡಿಗಳ ಪರೇಡ್ನಲ್ಲಿ ಭಾಗವಹಿಸಿದ್ದ ಎಲ್ಲ ಅಪರಾಧ ಹಿನ್ನೆಲೆ ಹೊಂದಿರುವವರ ಪೂರ್ಣ ಬಯೋಡೇಟಾ ಸಂಗ್ರಹಿಸಿ ಜತೆಗೆ ಹೆಬ್ಬೆಟ್ಟು ಸಹಿ ಪಡೆಯಲಾಯ್ತು. ಇದರಲ್ಲಿ ಹಲವು ಅಪರಾಧಿಗಳು ಅಂಥ ಚಟುವಟಿಕೆ ಬಿಟ್ಟು ಸ್ವಂತ ಉದ್ಯೋಗ ಮಾಡುತ್ತಿರುವುದಾಗಿ ಹೇಳಿಕೊಂಡರು. ಕೆಲವರು ಚಹಾದ ಅಂಗಡಿ, ಪೇಪರ್ ಹಾಕುವುದು, ಪಂಚರ್ ಅಂಗಡಿ ತೆರೆದಿರುವ ಕುರಿತು ತಮ್ಮ ದಿನನಿತ್ಯದ ಕಾರ್ಯ ಚಟುವಟಿಕೆಗಳ ಬಗ್ಗೆ ಡಿವೈಎಸ್ ಪಿ ಶ್ರೀಧರ ದೊಡ್ಡಿ ಬಳಿ ಮಾಹಿತಿ ಹಂಚಿಕೊಂಡರು.
ಅಪರಾಧ ಕೃತ್ಯಗಳಿಂದ ದೂರವಿದ್ದು, ಕುಟುಂಬದ ಜತೆ ನೆಮ್ಮದಿಯಾಗಿ ಜೀವನ ನಡೆಸಿ ಎಂದು ಸಲಹೆ ನೀಡಿ ಕಳಿಸಿದ್ರು.