ವಿಜಯಪುರ : ಟಂಟಂಗೆ ಕಾರು ಡಿಕ್ಕಿಯಾದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಜನರಿಗೆ ಗಾಯಗಳಾದ ಘಟನೆ ದೇವರಹಿಪ್ಪರಗಿ ಪಟ್ಟಣದ ಹೊರ ವಲಯದಲ್ಲಿ ಸಂಭವಿಸಿದೆ.
ಗಾಯಾಳುಗಳನ್ನು ದೇವರಹಿಪ್ಪರಗಿ ಹಾಗೂ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅದರಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿವೆ. ಘಟನೆಯಲ್ಲಿ ಮೃತಪಟ್ಟ ಮಹಿಳೆಯನ್ನು ಇಂಗಳಗಿ ಗ್ರಾಮದ ನಿವಾಸಿ ಭಾರತಿ ಬಡಿಗೇರ(40) ಎಂದು ತಿಳಿದು ಬಂದಿದೆ.
ಕೊಟಕನೂರಗೆ ಕೂಲಿ ಕೆಲಸಕ್ಕೆ ಹೋಗಿ ವಾಪಸ್ ಇಂಗಳಗಿ ಗ್ರಾಮಕ್ಕೆ ಟಂಟಂ ವಾಹನದಲ್ಲಿ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಟಂಟಂನಲ್ಲಿದ್ದ ಮಹಿಳೆ ಮೃತಪಟ್ಟಿದ್ದಾರೆ.
ಜತೆಗೆ ಇತರ 10 ಮಂದಿ ಗಾಯಗೊಂಡಿದ್ದಾರೆ. ಕಾರು ಚಾಲಕ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ದೇವರಹಿಪ್ಪರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.