ವಿಜಯಪುರ: ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ಬಾಕಿ 19 ಜನರ ವರದಿ ಸಹ ನೆಗೆಟಿವ್ ಬಂದಿದೆ. ಈ ಮೊದಲು 5 ಜನರ ವರದಿಗಳು ನೆಗೆಟಿವ್ ಬಂದಿದ್ದವು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಬ್ಲಿಘಿ ಜಮಾತ್ನಲ್ಲಿ ಜಿಲ್ಲೆಯಿಂದ ಒಟ್ಟು 24 ಜನರು ಭಾಗವಹಿಸಿದ್ದರು. ಈಗ ಎಲ್ಲರ ವರದಿಗಳು ನೆಗೆಟಿವ್ ಬಂದಿದೆ. ಈವರೆಗೆ ಕಳುಹಿಸಿದ ಬೇರೆ ಬೇರೆ 50 ಜನರಲ್ಲಿ 48 ವರದಿಗಳು ನೆಗೆಟಿವ್ ಬಂದಿವೆ. ಇನ್ನೂ ಎರಡು ವರದಿ ಬರಬೇಕಿದೆ. ಬಾಗಲಕೋಟೆಯಲ್ಲಿ ಮೃತ ವೃದ್ಧನ ಜೊತೆ ಸಂಪರ್ಕದಲ್ಲಿದ್ದ ಇಬ್ಬರನ್ನ ವಿಜಯಪುರದಲ್ಲಿ ಕ್ವಾರಂಟೈನ್ನಲ್ಲಿಡಲಾಗಿದೆ ಎಂದರು.
ಎಸ್ಪಿ ಅನುಪಮ ಅಗರವಾಲ್ ಮಾತನಾಡಿ, ಬಾಗಲಕೋಟೆಯಲ್ಲಿ ಮೃತಪಟ್ಟಿರುವ ವ್ಯಕ್ತಿಯ ಮಗನ ಜೊತೆ ಬೆಂಗಳೂರಿನಿಂದ ಇಳಕಲ್ವರೆಗೂ ಮುದ್ದೇಬಿಹಾಳದ ಇಬ್ಬರು ವ್ಯಕ್ತಿಗಳು ಕಾರ್ನಲ್ಲಿ ಬಂದಿದ್ದರು. ಆ ಇಬ್ಬರು ಆರು ಜನರೊಂದಿಗೆ ಇಳಕಲ್ನಿಂದ ಮುದ್ದೇಬಿಹಾಳಕ್ಕೆ ಹೋಗಿದ್ದಾರೆ. ಹಾಗಾಗಿ ಅವರ ಜೊತೆಗೆ ಮಾರ್ಚ್ 23ರಂದು ಇಬ್ಬರು ಬಂದಿದ್ದಾರೆ ಎಂಬ ಮಾಹಿತಿ ಮೇರೆಗೆ ಅವರನ್ನು ನಿಗಾದಲ್ಲಿ ಇರಿಸಲಾಗಿದೆ.
ದೆಹಲಿಯ ತಬ್ಲಿಘಿ ಜಮಾತ್ಗೆ ಜಿಲ್ಲೆಯಿಂದ ಹೋದವರು 240 ಜನ ಇದ್ದಾರೆ. ಇವರೆಲ್ಲಾ ನಿಜಾಮುದ್ದೀನ್ ಸಭೆಗೆ ಜನವರಿ, ಫೆಬ್ರವರಿ, ಮಾರ್ಚ್ನಲ್ಲಿ ಹೋಗಿ ಬಂದಿದ್ದಾರೆ. ಆದ್ರೆ ಅವರು ಹೋಗಿ ಬಂದು ಬಹಳ ದಿನ ಆಗಿರುವುದರಿಂದ ಅವರ ಬಗ್ಗೆ ಭಯ ಪಡುವ ಅಗತ್ಯವಿಲ್ಲ. 28 ದಿನಗಳ ಒಳಗೆ ದೆಹಲಿಗೆ ಹೋಗಿ ಬಂದವರು ಕೇವಲ 29 ಜನರು ಮಾತ್ರ ಎಂದರು.