ವಿಜಯಪುರ: ದೆಹಲಿ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ 17 ಜನರ ಪ್ರಾಥಮಿಕ ಮಾಹಿತಿ ಸಂಗ್ರಹಿಸಿದೆ. ಈವರೆಗೆ 22 ಜನ ಸಭೆಯಲ್ಲಿ ಪಾಲ್ಗೊಂಡಿರುವ ಮಾಹಿತಿ ಲಭ್ಯವಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ 5 ಜನರನ್ನು ಗುರುತಿಸಿ ಕ್ವಾರಂಟೈನ್ ಮಾಡಲಾಗಿದೆ. ಈಗ ಮತ್ತೆ ಪತ್ತೆಯಾಗಿರುವ 17 ಜನರ ಮಾಹಿತಿ ಪಡೆಯಲಾಗಿದೆ. ಈ 17 ಜನರ ಕ್ವಾರಂಟೈನ್ ಅವಧಿ ಮುಗಿದಿದೆ. ಸರ್ಕಾರದ ನಿರ್ದೇಶನದ ಬಳಿಕ ಅವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗುವುದು. ಇವರೆಲ್ಲ ವಿಜಯಪುರ, ಮುದ್ದೇಬಿಹಾಳ, ಬಸವನ ಬಾಗೇವಾಡಿ ತಾಲೂಕಿಗೆ ಸೇರಿದವರಾಗಿದ್ದಾರೆ ಎಂದು ವಿವರ ಒದಗಿಸಿದರು.
ಇವರು ಮಾರ್ಚ್ 4 ಮತ್ತು 5ರಂದು ದೆಹಲಿಯ ಸಭೆಯಲ್ಲಿ ಭಾಗಿಯಾಗಿ ಮಾ.8 ರಂದು ವಿಜಯಪುರಕ್ಕೆ ಬಂದಿದ್ದಾರೆ. ಈವರೆಗೆ 337 ವಿದೇಶಗಳಿಂದ ವಿಜಯಪುರ ಜಿಲ್ಲೆಗೆ ಬಂದಿದ್ದಾರೆ. 28 ಜನರನ್ನು ಹೋಂ ಕ್ವಾರಂಟೈನ್ನಲ್ಲಿಡಲಾಗಿದೆ ಎಂದು ಡಿಸಿ ತಿಳಿಸಿದರು.
ಮಲೇಶಿಯಾ ಮತ್ತು ಇಂಡೋನೇಶಿಯಾ ಪ್ರವಾದಿಗರೊಂದಿಗೆ ಸಂಪರ್ಕ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಡಿಸಿ, ಈ 4 ಜನರಲ್ಲಿ 3 ವರದಿಗಳು ನೆಗೆಟಿವ್ ಬಂದಿವೆ. ಇನ್ನೊಂದು ವರದಿ ಬಾಕಿ ಇದೆ. 4 ರಿಂದ 8ರ ವರೆಗೆ ದೆಹಲಿ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಕೊಲ್ಕತ್ತಾ ಮೂಲದ 5 ಜನ ಪುರುಷರು ಮತ್ತು ಅವರೊಂದಿಗೆ ಸಂಪರ್ಕದಲ್ಲಿದ್ದ 5 ಜನರ ವರದಿ ಬಾಕಿ ಇದೆ ಎಂದರು.