ಮುದ್ದೇಬಿಹಾಳ: ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆಯಿಂದ ಜನರಿಗೆ ತೀವ್ರ ತೊಂದರೆಯಾಗುತ್ತಿರುವ ಬಗ್ಗೆ ಸಾರ್ವಜನಿಕ ಸಭೆಯಲ್ಲಿ ನಾಗರಿಕರು ಪೊಲೀಸರಿಗೆ ದೂರು ನೀಡಿದರು.
ಪಟ್ಟಣದ ಬಸವೇಶ್ವರ ವೃತ್ತದ ಸುತ್ತಮುತ್ತಲೂ ಬೈಕ್‌ಗಳು, ತಳ್ಳುಗಾಡಿಗಳ ಸಮಸ್ಯೆ ಮೀತಿ ಮೀರಿದೆ. ಇಲ್ಲಿ ಸಾರ್ವಜನಿಕರು ಅಂಗಡಿಗಳಿಗೆ ತೆರಳಿ ಏನಾದರೂ ಖರೀದಿಸಬೇಕು ಎಂದರೂ ಆಗುವುದಿಲ್ಲ. ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ವಾಹನಗಳನ್ನು ನಿಲ್ಲಿಸುವುದರಿಂದ ಜನರ ಓಡಾಟಕ್ಕೆ ತೊಂದರೆ ಆಗುತ್ತಿದೆ ಎಂದು ಪುರಸಭೆ ಮಾಜಿ ಸದಸ್ಯ ಕಾಮರಾಜ ಬಿರಾದಾರ ಪೊಲೀಸರ ಗಮನಕ್ಕೆ ತಂದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಪಿಎಸ್ಐ ಎಂ.ಬಿ.ಬಿರಾದಾರ ಅವರು, ಸಾರ್ವಜನಿಕರು ಅಡ್ಡಾದಿಡ್ಡಿಯಾಗಿ ತಮ್ಮ ವಾಹನಗಳನ್ನು ನಿಲುಗಡೆ ಮಾಡದೇ ಪೊಲೀಸರೊಂದಿಗೆ ಸಹಕಾರ ಮಾಡಬೇಕು. ಈ ಬಗ್ಗೆ ತಿಳಿವಳಿಕೆ ಹೇಳಲು ಹೋದರೆ, ದಂಡ ಹಾಕಲು ಹೋದರೆ ವಾಗ್ವಾದ ಮಾಡುತ್ತಾರೆ. ಪೊಲೀಸರಿಗೂ ಇತಿಮಿತಿಗಳ ಪರಿಮಿತಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಾರ್ವಜನಿಕರಿಗೆ ತೊಂದರೆಯಾಗದಂತೆ ಹೋಳಿ ಹಬ್ಬವನ್ನು ಆಚರಿಸಬೇಕು ಎಂದು ಪಿಎಸ್ಐ ಎಂ.ಬಿ.ಬಿರಾದಾರ ಹೇಳಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸೋಮವಾರ ಸಂಜೆ ನಡೆದ ಹೋಳಿ ಹಬ್ಬದ ಶಾಂತಿಪಾಲನಾ ಸಭೆಯಲ್ಲಿ ಅವರು ಮಾತನಾಡಿದರು. ಬಣ್ಣದಾಟದ ಹೆಸರಿನಲ್ಲಿ ಕಿಡಿಕೇಡಿತನಕ್ಕೆ ಆಸ್ಪದ ಕೊಡಬೇಡಿ. ಹಿಂದೂ ಮುಸ್ಲಿಂ ಬಾಂಧವರು ಒಟ್ಟಾಗಿಯೇ ಸೌಹಾರ್ದ ಬದುಕನ್ನು ನಡೆಸಿಕೊಂಡು ಬರುತ್ತಿರುವ ಇತಿಹಾಸ ಮುದ್ದೇಬಿಹಾಳ ತಾಲೂಕು ಹೊಂದಿದ್ದು ಹದ್ದುಮೀರಿದ ವರ್ತನೆ ಕಂಡು ಬಂದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.