ವಿಜಯಪುರ: ನೀರಿನ ಸಮಸ್ಯೆಯಿಂದ ಬೇಸತ್ತ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮಸ್ಥರು ಗ್ರಾಮ ಪಂಚಾಯತ್ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ.
ಖಾಲಿ ಕೊಡಗಳನ್ನ ಹಿಡಿದು ಗ್ರಾಮ ಪಂಚಾಯತ್ ಕಚೇರಿಗೆ ಆಗಮಿಸಿದ್ದ ಬಿದರಕುಂದಿ ಗ್ರಾಮದ 3ನೇ ವಾರ್ಡಿನ ನಿವಾಸಿಗಳು ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ. ಸುಮಾರು ಮುರು ನಾಲ್ಕು ತಿಂಗಳಿಂದ ನೀರಿನ ಸಮಸ್ಯೆ ಇದ್ದು, ಯಾವ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿಲ್ಲ. ಕೂಡಲೇ ನಮ್ಮ ವಾರ್ಡಿಗೆ ನೀರು ಒದಗಿಸುವಂತೆ ಆಗ್ರಹಿಸಿದರು. ಅಲ್ಲದೆ 3ನೇ ವಾರ್ಡಿನಲ್ಲಿ ಸುಮಾರು 200 ಮನೆಗಳಿವೆ, ಯಾವ ಮನೆಗೂ ಕುಡಿಯುವ ನೀರಿನ ನಲ್ಲಿ ಸಂಪರ್ಕ ಕಲ್ಪಿಸಿಲ್ಲ. ಈ ವಾರ್ಡಿನ ಪಕ್ಕದಲ್ಲಿ ಕೇವಲ ಒಂದೇ ಒಂದು ನೀರಿನ ಟ್ಯಾಂಕ್ ಇದ್ದು, ಅದಕ್ಕೂ ಕೂಡ ಸರಿಯಾಗಿ ನೀರು ಪುರೈಸಿಲ್ಲ. ಹಗಲು ರಾತ್ರಿ ಎನ್ನದೆ ನೀರಿನ ಟ್ಯಾಂಕ್ ಹತ್ತಿರವೇ ಕಾಯುವ ಪರಿಸ್ಥಿತಿ ಇದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ತಾಲೂಕು ಪಂಚಾಯತ್ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ದೇಸಾಯಿ ಪ್ರತಿಭಟನಾಕಾರರ ಮನವೊಲಿಸಿ ಗ್ರಾಮ ಪಂಚಾಯಯತ್ಗೆ ಹಾಕಿದ ಬೀಗವನ್ನು ತೆಗೆಸಿದ್ದಾರೆ. ಈಗಾಗಲೇ 3ನೇ ವಾರ್ಡಿಗೆ ಪೈಪ್ಲೈನ್ ಅಳವಡಿಸಲು ಟೆಂಡರ್ ಕರೆಯಲು ನಿರ್ಧರಿಸಲಾಗಿದೆ. ಚುನಾವಣೆ ಕಾರಣ ತಾತ್ಕಾಲಿಕವಾಗಿ ಟೆಂಡರ್ ಪ್ರಕ್ರಿಯೆಯನ್ನು ತಡೆ ಹಿಡಿಯಲಾಗಿದೆ. ಚುನಾವಣೆ ಮುಗಿದ ಕೂಡಲೇ ಟೆಂಡರ್ ಪ್ರಕ್ರಿಯೆ ಆರಂಭಿಸಿ ವಾರ್ಡಿಗೆ ನೀರು ಪೂರೈಸಲಾಗುವುದು ಅಂತ ಭರವಸೆ ನೀಡಿದ್ದಾರೆ.
ಅಧಿಕಾರಿಗಳ ಭರವಸೆ ಹಿನ್ನೆಲೆ ಪ್ರತಿಭಟನೆ ಹಿಂಪಡೆಯದ ಗ್ರಾಮಸ್ಥರು, ನೀರು ಸರಬರಾಜು ಆಗದೆ ಹೋದರೆ ಉಗ್ರ ಹೋರಾಟ ನಡೆಸೋದಾಗಿ ಎಚ್ಚರಿಕೆ ನೀಡಿದ್ದಾರೆ.