ವಿಜಯಪುರ: ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಖಾತೆ ಸಚಿವ ಶ್ರೀಮಂತ ಪಾಟೀಲ ನಗರದ ನೂತನ ಪ್ರವಾಸಿ ಮಂದಿರಲ್ಲಿ ಕೈಮಗ್ಗ ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಪದವಿ ಪೂರ್ವ ಕಾಲೇಜ್ ಹಾಗೂ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿ ಶಿಕ್ಷಣ ಮುಂದೆವರೆಸಿರುವ ಹಾಗೂ ಉದ್ಯೋಗ ಲಭ್ಯವಾಗುವವರೆಗೆ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಟ್ರ್ಯಾಕ್ ರೆಕಾರ್ಡ್ ನಿರ್ವಹಣೆ ಮಾಡುವಂತೆ ಕೈಮಗ್ಗ, ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಖಾತೆ ಸಚಿವ ಶ್ರೀಮಂತ ಪಾಟೀಲ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಈವರೆಗೆ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಬಗ್ಗೆ ಹಾಗೂ ಶಾಲಾ ಕಾಲೇಜುಗಳಿಂದ ಶಿಕ್ಷಣ ವಂಚಿತರಾದವರ ಬಗ್ಗೆಯೂ ಗುರುತಿಸುವ ಜೊತೆಗೆ ಅವರ ಭವಿಷ್ಯದ ಹಿತದೃಷ್ಟಿಯಿಂದ ಸೂಕ್ತ ದಾಖಲಾತಿಗಳನ್ನು ನಿರ್ವಹಿಸುವಂತಹ ವ್ಯವಸ್ಥೆ ಜಾರಿಗೊಳಿಸುವಂತೆ ತಿಳಿಸಿದ ಅವರು, ಪ್ರತಿ ವರ್ಷ ಈ ಕುರಿತು ಅಂಕಿ-ಅಂಶ ನಿರಂತರ ದಾಖಲಿಸುವಂತೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯು ಶಿಕ್ಷಣ ಸುಧಾರಿಸಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಹೆಚ್ಚಿನ ಫಲಿತಾಂಶ ತರುವ ಪ್ರಯತ್ನ ಮಾಡಬೇಕು. ಸರ್ಕಾರಿ ಶಾಲಾ-ಕಾಲೇಜುಗಳು ಮಾದರಿ ಶಿಕ್ಷಣ ವ್ಯವಸ್ಥೆ, ಸಕಲ ಮೂಲ ಸೌಕರ್ಯ ಮತ್ತು ಗುಣಾತ್ಮಕ ಶಿಕ್ಷಣ ನೀಡುವ ವಾತಾವರಣ ರೂಪಿಸಿಕೊಳ್ಳಬೇಕು. ರಾಜ್ಯದ ಸರಾಸರಿ ಫಲಿತಾಂಶಕ್ಕಿಂತ ಕಡಿಮೆ ಫಲಿತಾಂಶ ತರುವಂತಹ ಸರ್ಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಜೊತೆಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗುವುದು. ಅದರಂತೆ ಅಲ್ಪಸಂಖ್ಯಾತರ ವಸತಿ ಶಾಲೆಗಳು ನಿಗದಿತ ಫಲಿತಾಂಶ ಸಾಧಿಸುವಂತೆಯೂ ಸೂಚನೆ ನೀಡಿದರು.
ಅಲ್ಪಸಂಖ್ಯಾತರ ಶೈಕ್ಷಣಿಕ ವ್ಯವಸ್ಥೆ ಸುಧಾರಿಸಬೇಕು. ಅವರನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸಬೇಕು. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮಾಂತರ ಪ್ರದೇಶದಲ್ಲಿ ಶಾಲಾ-ಕಾಲೇಜು ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿ ಮೂಲಕ ಶೈಕ್ಷಣಿಕ ಪರಿಸರ ಸುಧಾರಣೆಗೆ ಗಮನ ನೀಡಬೇಕು. ಮುಖ್ಯಮಂತ್ರಿಗಳ ಅಲ್ಪಸಂಖ್ಯಾತರ ಅಭಿವೃದ್ಧಿ ಯೋಜನೆಯಡಿ ವಿಧಾನಸಭಾ ಕ್ಷೇತ್ರವಾರು ಪೂರ್ಣಗೊಂಡ, ಪ್ರಗತಿಯಲ್ಲಿರುವ ಕಾಮಗಾರಿಗಳ ಬಗ್ಗೆ ಸಮಗ್ರ ವರದಿ ಸಲ್ಲಿಸಬೇಕು. ಅದರಂತೆ ವಿವಿಧ ಅಲ್ಪಸಂಖ್ಯಾತರ ಶಾಲಾ-ಕಾಲೇಜುಗಳಲ್ಲಿ ವಿಜ್ಞಾನ, ಗಣಿತ ಹಾಗೂ ಇಂಗ್ಲಿಷ್ ವಿಷಯಗಳ ನುರಿತ ಉಪನ್ಯಾಸಕರನ್ನು ನಿಯೋಜಿಸುವಂತೆ ಸೂಚನೆ ನೀಡಿದರು.