ವಿಜಯಪುರ: ನೆಗಡಿ, ಕೆಮ್ಮು, ಜ್ವರ ಹಾಗೂ ಉಸಿರಾಟದ ತೊಂದರೆಗೆ ಒಳಗಾಗಿ ಖಾಸಗಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ಒದಗಿಸಬೇಕು. ಚಿಕಿತ್ಸೆಗೆ ನಿರಾಕರಿಸಿದ ಯಾವುದೇ ದೂರುಗಳು ಬಂದಲ್ಲಿ ಅಂತಹ ಆಸ್ಪತ್ರೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
ಯಾವುದೇ ವ್ಯಕ್ತಿ ನೆಗಡಿ, ಕೆಮ್ಮು, ಜ್ವರ ಹಾಗೂ ಉಸಿರಾಟ ತೊಂದರೆಗೆ ಒಳಗಾಗಿ ಆಸ್ಪತ್ರೆಗೆ ಬಂದರೆ ಖಾಸಗಿ ಆಸ್ಪತ್ರೆಗಳ ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಈಗಾಗಲೇ ಇಂತಹ ರೋಗಿಗಳ ಚಿಕಿತ್ಸೆಗಾಗಿ ಸರ್ಕಾರ ಸೂಕ್ತ ಮಾರ್ಗಸೂಚಿ ಪ್ರಕಟಿಸಿ ಚಿಕಿತ್ಸೆಗೆ ದರ ಸಹ ನಿಗದಿಪಡಿಸಿದೆ. ಆದರೆ ಕೆಲ ಆಸ್ಪತ್ರೆಗಳ ವೈದ್ಯರು ಚಿಕಿತ್ಸೆ ನೀಡುವ ಬಗ್ಗೆ ನಿರಾಕರಿಸುತ್ತಿರುವ ಮತ್ತು ಹೆಚ್ಚಿನ ದರ ವಿಧಿಸುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಇಂತಹ ಕಿರುಕುಳ, ದೂರು ಬಂದಲ್ಲಿ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.
ಯಾವುದೇ ಕಾಯಿಲೆ ಅಥವಾ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರು ತಕ್ಷಣ ಆಸ್ಪತ್ರೆಗೆ ತೆರಳಿ ಪರೀಕ್ಷಿಸಬೇಕು. ನೆಗಡಿ, ಕೆಮ್ಮು, ಜ್ವರ ಕಾಣಿಸಿದ ತಕ್ಷಣ ಸಕಾಲಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಮೂಲಕ ಮುಂದೆ ಆಗಲಿರುವ ಅಪಾಯದಿಂದ ಪಾರಾಗುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಯಲ್ಲಿ ತೊಡಗಿರುವವರನ್ನು ಬಂಧಿಸುವ ವೇಳೆ ಪೊಲೀಸ್ ಇಲಾಖೆಯ 8-10 ಜನರಿಗೆ ಕೋವಿಡ್ ಸೋಂಕು ತಗುಲಿದ್ದು, ಇವರೆಲ್ಲರ ಸಂಪರ್ಕದಲ್ಲಿರುವ ಸುಮಾರು 800-900 ಜನರ ಸ್ವ್ಯಾಬ್‍ಗಳನ್ನು ಸಂಗ್ರಹಿಸಲಾಗಿದೆ. ಕೋವಿಡ್ ಲಕ್ಷಣ ಇದ್ದವರಿಗೆ ನಿಗದಿತ ಆಸ್ಪತ್ರೆ ಮತ್ತು ಲಕ್ಷಣ ಇಲ್ಲದವರಿಗೆ ಹೋಮ್ ಐಸೊಲೇಷನ್‍ಗೆ ಒಳಪಡಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.