ವಿಜಯಪುರ: ನಿತ್ಯ ಬಳಕೆಯ ಹಸಿ ಮೆಣಸಿನಕಾಯಿ ಧಾರಣೆ ಕುಸಿತಗೊಂಡ ಪರಿಣಾಮ ಅಧಿಕ ಬೆಲೆಯ ಆಸೆಯಿಂದ ಎಪಿಎಂಸಿಗೆ ಬೆಳೆ ತಂದಿದ್ದ ರೈತರು ಮತ್ತೆ ನಿರಾಸೆ ಅನುಭವಿಸಿದ್ದಾರೆ. ಶುಕ್ರವಾರ ಕ್ವಿಂಟಲ್ ಹಸಿ ಮೆಣಸಿನಕಾಯಿಗೆ 5 ಸಾವಿರ ರೂ. ಇದ್ದದ್ದು ಈಗ 2 ಸಾವಿರಕ್ಕೆ ಇಳಿದಿದೆ. ಹೀಗಾಗಿ ರೈತರು ಕಂಗಾಲಾಗಿದ್ದಾರೆ.
ಆಹಾರ ಬಳಕೆಯಲ್ಲಿ ಪ್ರಮುಖ ಸ್ಥಾನ ಪಡೆದಿರುವ ಹಸಿ ಮೆಣಸಿನಕಾಯಿಗೆ ಬೇಡಿಕೆ ನಿರಂತರವಾಗಿ ಇರುತ್ತದೆ. ಹೀಗಾಗಿಯೇ ರೈತರು ಒಣ ಮೆಣಸಿನಕಾಯಿ ಮಾಡುವ ಮೊದಲೇ ಹಸಿ ಮೆಣಸಿನಕಾಯನ್ನು ಕಿತ್ತು ಮಾರುಕಟ್ಟೆಗೆ ತರುತ್ತಾರೆ. ಆದರೆ ಅವರ ದುರಾದೃಷ್ಟಕ್ಕೆ ಎಪಿಎಂಸಿಗೆ ಆವಕ ಪ್ರಮಾಣ ಅಧಿಕವಾಗಿ ಏಜೆಂಟರು ಬೆಲೆಯನ್ನು ಪೂರ್ಣವಾಗಿ ಇಳಿಸಿದ ಪರಿಣಾಮ ಅನ್ನದಾತರ ಪಾಲಿಗೆ ಹಸಿ ಮೆಣಸಿನ ಕಾಯಿ ಇನ್ನೂ ಖಾರವಾಗಿ ಪರಿಣಮಿಸಿದೆ.
ಅಲ್ಲದೇ ಸದ್ಯ ಮದುವೆ, ವಿವಿಧ ಸಮಾರಂಭಗಳು ಇಲ್ಲದ ಕಾರಣ ಹಸಿ ಮೆಣಸಿನಕಾಯಿಗೆ ಬೇಡಿಕೆ ಕಡಿಮೆಯಾಗುತ್ತದೆ. ಖರೀದಿಗೆ ಗ್ರಾಹಕರು ಬರುತ್ತಿಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಹೊರ ಭಾಗದಿಂದ ಅಧಿಕ ಆವಕ: ವಿಜಯಪುರ ಜಿಲ್ಲೆಯಲ್ಲಿಯೇ ಎರಡು- ಮೂರು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹಸಿ ಮೆಣಸಿನಕಾಯಿ ಬೆಳೆಯಲಾಗುತ್ತದೆ. ಇದರ ಜೊತೆಗೆ ಚಿಕ್ಕೋಡಿ, ಬೆಳಗಾವಿ ಭಾಗದಿಂದ ವಿಜಯಪುರ ಎಪಿಎಂಸಿಗೆ ಹಸಿ ಮೆಣಸಿನಕಾಯಿ ಆವಕವಾಗುತ್ತದೆ. ಈ ಬಾರಿ ಎಲ್ಲ ಕಡೆಯಿಂದಲೂ ಒಳ್ಳೆಯ ಫಸಲು ಬಂದಿರುವುದರಿಂದ ಆವಕ ಪ್ರಮಾಣವೂ ಮಿತಿ ಮೀರಿದೆ. ಹೀಗಾಗಿ ಪರಿಸ್ಥಿತಿಯನ್ನು ಲಾಭ ಮಾಡಿಕೊಳ್ಳುವ ದಲ್ಲಾಳಿಗಳು ಬೆಲೆಯನ್ನು ಇಳಿಸಿದ್ದಾರೆ. ಇದರ ಪರಿಣಾಮ ನೇರವಾಗಿ ರೈತರು ತತ್ತರಿಸಿದ್ದಾರೆ.
ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಸಿ ಮೆಣಸಿನ ಕಾಯಿ ಬೆಲೆ ಕುಸಿತದ ವರದಿಯನ್ನು ಸರ್ಕಾರದ ಗಮನಕ್ಕೆ ತಂದಿದೆ. ಅಲ್ಲದೇ ಹೊರ ಭಾಗದಿಂದ ಜಿಲ್ಲೆಗೆ ಬರುವ ಹಸಿ ಮೆಣಸಿನಕಾಯಿಗೆ ನಿಬಂಧನೆಗಳನ್ನು ಹಾಕಿದರೆ ಜಿಲ್ಲೆಯ ರೈತರಿಗೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಧಿಕ ಇಳುವರಿ ಮಾರುಕಟ್ಟೆಗೆ ಬರುತ್ತಿದೆ. ಹೀಗಾಗಿ ಕಳೆದ ಎರಡು ತಿಂಗಳ ಹಿಂದೆ ಕ್ವಿಂಟಲ್‌ಗೆ 5 ಸಾವಿರ ರೂ. ಇದ್ದ ಹಸಿ ಮೆಣಸಿನಕಾಯಿ ಬೆಲೆ ಈಗ ಎರಡು ಸಾವಿರ ರೂ. ಗೆ ಇಳಿದಿದೆ. ಅಲ್ಲದೆ ಮದುವೆ ಸಂದರ್ಭಗಳು ಇಲ್ಲದ್ದರಿಂದ ಖರೀದಿದಾರರ ಕೊರತೆಯೂ ಇದೆ. ಹೀಗಾಗಿ ಬೆಲೆ ಕಡಿಮೆಯಾಗಿದೆ ಎಂದು ಎಪಿಎಂಸಿ ಆಯುಕ್ತೆ ಶೈಲಜಾ ಎಂ. ವಿ. ಅವರು ಹೇಳಿದರು.
ಉಪ ನಿರ್ದೇಶಕರ ಹೇಳಿಕೆ: ಜಿಲ್ಲೆಯಲ್ಲಿಯ ರೈತರು ಹಸಿ ಮೆಣಸಿನ ಕಾಯಿಯನ್ನು ಬೆಳೆಯುತ್ತಾರೆ. ಅಲ್ಲದೇ ಬೆಳಗಾವಿ, ಚಿಕ್ಕೋಡಿ ಭಾಗದಿಂದಲೂ ಅಧಿಕ ಪ್ರಮಾಣದ ಬೆಳೆ ಆವಕ ಆಗುತ್ತಿದೆ. ಹೀಗಾಗಿ ಧಾರಣೆ ಕುಸಿತಗೊಂಡಿದೆ. ಅವರು ಬೆಳೆದ ಬೆಳೆಗೆ ಸೂಕ್ತ ಬೆಲೆ ದೊರೆಯಬೇಕಿದೆ ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕ ಎಸ್. ಎಂ. ಬರಗಿಮಠ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ರೈತನ ಕೈ ಹಿಡಿದ ದ್ರಾಕ್ಷಿ ಬೆಳೆ - ಉತ್ತಮ ಬೆಲೆಯಿಂದ ರೈತನ ಮೊಗದಲ್ಲಿ ಮಂದಹಾಸ