ಮುದ್ದೇಬಿಹಾಳ: ಈಗಾಗಲೇ ಶೇ.15 ರಷ್ಟು ಮೀಸಲಾತಿ ಅಡಿ 320 ಜಾತಿಗಳು ಒಳಪಟ್ಟಿವೆ. ಮತ್ತೊಂದು ಜಾತಿಯನ್ನು ಓಬಿಸಿಗೆ ಸೇರಿಸುವ ಮುನ್ನ ಆ ಪ್ರಮಾಣವನ್ನು ಶೇ.30 ಕ್ಕೇರಿಸಬೇಕು ಎಂದು ಆರ್ಯ ಈಡಿಗ ಸಮಾಜದ ಪ್ರಣವಾನಂದ ಗುರೂಜಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಸೋಮವಾರ ತಾಲೂಕಾಡಳಿತದ ಪರವಾಗಿ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣ ಗುರೂಜಿ ಅವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಆರ್ಯ ಈಡಿಗ ಸಮಾಜಕ್ಕೆ ರಾಜ್ಯ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ. ಪ್ರತಿಯೊಂದು ಜಾತಿಗಳಿಗೆ ನಿಗಮ ಮಂಡಳಿ ರಚಿಸಲಾಗಿದೆ. ನಮ್ಮ ಜನಾಂಗದ ಅಭಿವೃದ್ಧಿಗೂ ನಿಗಮ ಮಂಡಳಿಯಲ್ಲಿ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಜನಾಂಗದ ಅಸ್ತಿತ್ವಕ್ಕೆ ಧಕ್ಕೆ: ಬಸವಣ್ಣ ಅವರು ಸೇಂದಿ ಮಾರಾಟ ಮಾಡುತ್ತಾ ಜೀವನ ಸಾಗಿಸುತ್ತಿದ್ದ ನಮ್ಮ ಆರ್ಯ ಈಡಿಗ ಸಮಾಜವನ್ನು ಕಾಯಕ ತತ್ವದ ಅಡಿ ಪ್ರೋತ್ಸಾಹಿಸಿದ್ದರು. ಆದರೆ, ಕೆಲವರು ನಮ್ಮ ಜನಾಂಗದ ವೃತ್ತಿಯನ್ನು ಹಾಳು ಮಾಡಿ ಜನಾಂಗದ ಅಸ್ತಿತ್ವಕ್ಕೆ ಧಕ್ಕೆ ತಂದಿದ್ದಾರೆ. ಸಿಎಂ ಹಾಗೂ ಕೇಂದ್ರ ಸರ್ಕಾರದ ವರಿಷ್ಠರು ಆರ್ಯ ಈಡಿಗ ಜನಾಂಗದವರಿಗೆ ನಿಗಮ ಮಂಡಳಿಯಲ್ಲಿ ಸ್ಥಾನಮಾನ ನೀಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷರಾದ ಎ.ನಾರಾಯಣಸ್ವಾಮಿ, ಎ.ಗಣೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಓದಿ: ಬಿಜೆಪಿ ಜನಾಶೀರ್ವಾದ ಯಾತ್ರೆ ಹಾರ-ತುರಾಯಿಗೆ ಮಾತ್ರ ಸೀಮಿತ : ಮಾಜಿ ಸಿಎಂ ಕುಮಾರಸ್ವಾಮಿ ಕಿಡಿ