ವಿಜಯಪುರ: ಪಿಒಪಿ ಗಣೇಶ ಮೂರ್ತಿಗಳನ್ನು ನಿಷೇಧಿಸಿದ್ದು ಇಲ್ಲಿನ ವ್ಯಾಪಾರಸ್ಥ ಕುಟುಂಬಗಳು ಸಂಕಷ್ಟದಲ್ಲಿವೆ.
ನಗರದ ಸುಮಾರು 75 ರಿಂದ 80 ಕುಟುಂಬಗಳು ಗಣೇಶ ಮೂರ್ತಿ ತಯಾರಿಸುವ ಕಾಯಕ ಮಾಡುತ್ತಿವೆ. ಹಬ್ಬದ ವೇಳೆ ಮೂರ್ತಿಗಳನ್ನು ಮಾರಾಟ ಮಾಡಿ ಬರುವ ಹಣವೇ ಈ ಕುಟುಂಬಗಳಿಗೆ ಮುಖ್ಯ ಆದಾಯ. ಈ ಕುಟುಂಬಗಳು ಶೇ.60ರಷ್ಟು ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸಿ ಉಳಿದ 40 ರಷ್ಟು ಪಿಒಪಿ ಗಣೇಶ ಮೂರ್ತಿ ತಯಾರಿಸುತ್ತವೆ.
ಕೊರೊನಾ ಆರಂಭವಾದಾಗಿನಿಂದ ಕುಟುಂಬಗಳು ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ಆದರೆ ಜನರು ಹೆಚ್ಚಾಗಿ ಪಿಒಪಿ ಗಣೇಶ ಮೂರ್ತಿಗಳನ್ನು ಖರೀದಿಸುತ್ತಿದ್ದಾರೆ. ಇದರಿಂದ ಕುಟುಂಬಗಳು ಸಂಕಷ್ಟ ಎದುರಿಸುತ್ತಿವೆ.
'ಪರಿಸರದ ಬಗ್ಗೆ ನಮಗೂ ಕಾಳಜಿ ಇದೆ. ಮಣ್ಣಿನ ಗಣೇಶ ಮೂರ್ತಿಗಳು ಸಾಕಷ್ಟು ಪ್ರಮಾಣದಲ್ಲಿ ದೊರೆಯುವುದಿಲ್ಲ. ಸಾರ್ವಜನಿಕರು ಕೂಡಾ ಪಿಒಪಿ ಗಣೇಶನನ್ನೇ ಇಷ್ಟಪಡುತ್ತಾರೆ. ಕೋವಿಡ್ನಿಂದ ನಮಗೆ ಉದ್ಯೋಗ ಇಲ್ಲದಂತಾಗಿದೆ. ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ಹವಾಮಾನ ವೈಪರೀತ್ಯಗಳಿಂದ ಮಣ್ಣಿನ ಗಣೇಶ ಮೂರ್ತಿಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದೆ. ಅವುಗಳನ್ನು ಖರೀದಿಸಲು ಜನರು ಮುಂದೆ ಬರುತ್ತಿಲ್ಲ. ಹೀಗಾಗಿ ಸ್ಟಾಕ್ ಇರುವ ಗಣೇಶ ಮೂರ್ತಿ ಮಾರಾಟಕ್ಕೆ ಅನುಮತಿ ಕೊಡಿ' ಎಂದು ಸರ್ಕಾರಕ್ಕೆ ವ್ಯಾಪಾರಸ್ಥರು ಮನವಿ ಮಾಡಿಕೊಳ್ಳುತ್ತಿದ್ದಾರೆ.