ವಿಜಯಪುರ: ಒಂದೆಡೆ ವರುಣಾರ್ಭಟಕ್ಕೆ ನೆಲಕ್ಕುರುಳಿದ ಮನೆ,ಇನ್ನೂಂಡೆದೆ ಕುಟುಂಬಸ್ಥರಿಗೆ ಕಾಡುತ್ತಿರುವ ಕಾಯಿಲೆಗಳು. 3 ಜನ ವಿಶೇಷ ಚೇತನರೇ ಇರುವ ಈ ಕುಟುಂಬ ಅಕ್ಷರಶಃ ನಲುಗಿ ಹೋಗಿದೆ.
ಹೌದು, ಈ ಹೃದಯ ವಿದ್ರಾವಕ ಘಟನೆ ಗುಮ್ಮಟನಗರಿ ವಿಜಯಪುರದ ವಾರ್ಡ್ ನಂ.23ರ ದರ್ಬಾರ್ ಬಡಾವಣೆಯಲ್ಲಿ ಕಂಡು ಬಂದಿದೆ. ಕುಸಿದಿರುವ ಮನೆಯಲ್ಲಿಯೇ ಈಗ 3 ಕುಟುಂಬಗಳು ವಾಸವಾಗಿವೆ. ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದ ಕುಟುಂಬಸ್ಥರು ಮಳೆಯಿಂದ ಈಗ ಕಂಗಾಲಾಗಿದ್ದಾರೆ.
ಕಳೆದ 3 ದಿನಗಳ ಹಿಂದೆ ಮನೆ ಬಿದ್ದಿದ್ದು, ರಿಪೇರಿಗೂ ಹಣವಿಲ್ಲದೆ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಸ್ವಲ್ಪ ಮಳೆ ಬಂದ್ರು ಪಕ್ಕದ ಮನೆ ಮುಂದೆ ಹೋಗಿ ಕುಳಿತುಕೊಳ್ಳಬೇಕಾಗುವ ಪರಿಸ್ಥಿತಿ ಕುಟುಂಬಸ್ಥರದ್ದಾಗಿದೆ. ಮೊದಲೇ ಕೊರೊನಾ ವೈರಸ್ ಭೀತಿಯಿಂದ ನಲಗುತ್ತಿರುವ ಕುಟುಂಬ ಸೂರಿದಲ್ಲದೆ ಸಂಕಷ್ಟಕ್ಕೆ ಸಿಲುಕಿದೆ. ಇವರಿಗೆ ಬೇರೆ ಮನೆ ಬಾಡಿಗೆ ಪಡೆಯಲು ಹಣವಿಲ್ಲ. ಈ ಕಾರಣಕ್ಕಾಗಿಯೇ ಮನೆಯ ಗೋಡೆ ನೆಲಕ್ಕುರುಳಿದ್ದರೂ ಅಲ್ಲೇ ವಾಸವಾಗಿದ್ದಾರೆ. ಇತ್ತ ಪ್ರತೀ ಕ್ಷಣ ಯಾವಾಗ ಮನೆ ಸಂಪೂರ್ಣ ಕುಸಿದು ಅಪಾಯ ತಂದೊಡ್ಡುತ್ತೋ ಎಂಬ ಆತಂಕವೂ ಇವರಲ್ಲಿದೆ.
ಇನ್ನು ಮನೆಯ ಯಜಮಾನ ಜಾಧವ್ ಶಸ್ತ್ರಚಿಕಿತ್ಸೆಗೆ ವೈದ್ಯರು 15 ಲಕ್ಷ ಖರ್ಚಾಗುತ್ತೆ ಎಂದು ಹೇಳಿದ್ದಾರಂತೆ. ಅಲ್ಲದೆ ತಂಗಿಯ ಮಗ ಅಭಿಷೇಕ ಎಂಜಿನಿಯರ್ ಓದಿದ್ರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಡಯಾಲಿಸಿಸ್ ಮಾಡಿಸಲು ವಾರಕ್ಕೆ 2 ಸಾವಿರ ರೂ. ಖರ್ಚು ಮಾಡಬೇಕಾಗಿದೆ. ಲಾಕ್ಡೌನ್ನಿಂದಾಗಿ ಉದ್ಯೋಗವಿಲ್ಲದೆ ಮತ್ತು ಇದ್ದ ಸೂರು ಬಿದ್ದಿರುವುದರಿಂದ ಕುಟುಂಬಸ್ಥರಿಗೆ ದಿಕ್ಕು ತೋಚದಂತಾಗಿದೆ. ಮನೆ ರಿಪೇರಿ ಹಾಗೂ ಚಿಕಿತ್ಸೆ ಪಡೆಯಲು ಕುಟುಂಬಸ್ಥರು ಸರ್ಕಾರ ಅಥವಾ ದಾನಿಗಳು ಸಹಾಯ ಮಾಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.