ವಿಜಯಪುರ: ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಯಿಂದ ಯಾವುದೇ ಸಮಾಜ ಮುಂದೆ ಬರಲು ಸಾಧ್ಯವಿಲ್ಲ ಎನ್ನುವ ಮೂಲಕ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಮಾಜಿ ಸಚಿವ ಎಂ.ಬಿ.ಪಾಟೀಲ ವಿರೋಧ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಕಾರಜೋಳ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೊಡ್ಡ ಸಮಾಜಗಳಿಗೆ ಅಭಿವೃದ್ಧಿ ನಿಗಮ ಸ್ಥಾಪಿಸಿದರೆ ಯಾವುದೇ ಪ್ರಯೋಜನವಿಲ್ಲ. ಈ ಹಿಂದೆ ಲಿಂಗಾಯತ ಧರ್ಮ ಪ್ರತ್ಯೇಕಕ್ಕೆ ನಾನು ಹೋರಾಟ ಮಾಡಿದಾಗ ಇವರೇ ಎಂ.ಬಿ.ಪಾಟೀಲ ಧರ್ಮ ಒಡೆಯುತ್ತಿದ್ದಾರೆ ಎಂದು ಕೂಗಿದರು. ಆದರೆ ಧರ್ಮ ಒಡೆಯಲು ಹೋದವರು ಯಾರು ಎಂದು ಮುಂದಿನ ದಿನಗಳಲ್ಲಿ ಪ್ರತ್ಯುತ್ತರ ನೀಡುತ್ತೇನೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ನಮ್ಮ ಲಿಂಗಾಯತ ಮಕ್ಕಳ ಭವಿಷ್ಯ ಹಾಳು ಮಾಡಿದ್ದಾರೆ. ನಿಜವಾಗಿ ಲಿಂಗಾಯತರಿಗೆ ಒಳ್ಳೆಯದು ಮಾಡುವುದಾದರೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ನೀಡಲಿ. ಕೇವಲ ನಿಗಮ ಸ್ಥಾಪಿಸಿದರೆ ಏನೂ ಪ್ರಯೋಜನವಿಲ್ಲ ಎಂದರು. ರಾಜ್ಯದಲ್ಲಿ ಲಿಂಗಾಯತ ಧರ್ಮದ 1.18 ಕೋಟಿ ಜನ ಇದ್ದಾರೆ. ನಿಗಮ ಸ್ಥಾಪಿಸಿ 1 ಸಾವಿರ ಕೋಟಿ ರೂ. ಕೊಟ್ಟರೆ ಸಾಲುವುದಿಲ್ಲ. ಲಿಂಗಾಯತರಿಗೆ ಒಳ್ಳೆಯದನ್ನು ಮಾಡುವುದಾದರೆ 5 ಸಾವಿರ ಕೋಟಿ ಮೀಸಲಿಡಲಿ ಎಂದರು.
ತನಿಖೆ ಎದುರಿಸಲಿ:
ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರೋಷನ ಬೇಗ್ ಬಂಧನ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಎಂ.ಬಿ.ಪಾಟೀಲ, ಅವರು ಅದರಲ್ಲಿ ಭಾಗಿಯಾಗಿದ್ದಾರೋ ಇಲ್ಲವೋ ಗೊತ್ತಿಲ್ಲ. ತನಿಖೆ ಎದುರಿಸಲಿ, ಸತ್ಯಾಸತ್ಯತೆ ಗೊತ್ತಾಗುತ್ತದೆ ಎಂದರು.