ವಿಜಯಪುರ: ಮುದ್ದೇಬಿಹಾಳ ಪಟ್ಟಣದ ಮಾರುತಿ ನಗರದಲ್ಲಿರುವ ಅಲ್ಪಸಂಖ್ಯಾತರ ವಸತಿ ನಿಲಯಕ್ಕೆ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿರುವ ಕ್ವಾರಂಟೈನ್‌ನಲ್ಲಿರುವವರನ್ನ ಸ್ಥಳಾಂತರ ಮಾಡುವ ಕ್ರಮಕ್ಕೆ ಇಲ್ಲಿನ ನಿವಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಮುದ್ದೇಬಿಹಾಳ ಪಟ್ಟಣದ ಆಸ್ಪತ್ರೆಯಲ್ಲಿ ಈಗಾಗಲೇ ಕ್ವಾರಂಟೈನ್ನಲ್ಲಿರುವ 9 ಜನ ತಮದಡ್ಡಿಯ ಜನರನ್ನ ಜನವಸತಿ ಪ್ರದೇಶವಾಗಿರುವ ಮಾರುತಿ ನಗರದ ವಸತಿ ನಿಲಯಕ್ಕೆ ಸ್ಥಳಾಂತರ ಮಾಡಲು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುತ್ತಿದ್ದರು. ಈ ಸುದ್ದಿ ತಿಳಿದ ಜನರು ಸ್ಥಳಕ್ಕೆ ಆಗಮಿಸಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು. ನೆಮ್ಮದಿಯಾಗಿ ಜೀವ ನಡೆಸುತ್ತಿರುವ ನಮ್ಮ ನಗರಕ್ಕೆ ಕ್ವಾರಂಟೈನ್‌ನಲ್ಲಿರುವವರನ್ನ ಸ್ಥಳಾಂತರ ಮಾಡುವುದು ಸರಿಯಲ್ಲ. ಕೂಡಲೇ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು.
ನೋಡಲ್ ಅಧಿಕಾರಿ ಡಾ. ಸಂಪತ್ ಗುಣಾರಿ, ಡಾ. ಸತೀಶ್ ತಿವಾರಿ ಮತ್ತಿತರರು ಸ್ಥಳ ಪರಿಶೀಲನೆಗೆ ಆಗಮಿಸಿದ್ದ ವೇಳೆ ಕ್ವಾರಂಟೈನ್‌ನಲ್ಲಿರುವವರನ್ನ ವಸತಿ ನಿಲಯಕ್ಕೆ ಸ್ಥಳಾಂತರಿಸುವ ಕ್ರಮಕ್ಕೆ ಮುಂದಾದರೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಜನರು ಎಚ್ಚರಿಸಿದರು. ಅಲ್ಲದೇ, ಕ್ವಾರಂಟೈನಲ್ಲಿರುವವರನ್ನ ವಸತಿ ನಿಲಯಕ್ಕೆ ತರುತ್ತಾರೆ ಎಂಬ ಸುದ್ದಿ ಹರಡುತ್ತಿದ್ದಂತೆ, ಅಲ್ಲಿನ ನಿವಾಸಿಗಳು ಅಲ್ಲಲ್ಲಿ ಮುಳ್ಳು ಕಂಟಿಗಳನ್ನ ಹಾಕಿ ರಸ್ತೆ ಬಂದ್ ಮಾಡಿದರು.
ಈ ಕುರಿತು ಮಾತನಾಡಿದ ತಹಶೀಲ್ದಾರ್ ಜಿ.ಎಸ್. ಮಳಗಿ, ಸ್ಥಳ ಪರಿಶೀಲನೆ ನಡೆಸಲು ಮೇಲಾಧಿಕಾರಿಗಳು ತಿಳಿಸಿದ್ದರು. ಆದರೆ, ಅಲ್ಲಿಗೆ ಕ್ವಾರಂಟೈನ್‌ನಲ್ಲಿರುವವರನ್ನ ಸ್ಥಳಾಂತರಿಸುವ ಕುರಿತು ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.