ಮುದ್ದೇಬಿಹಾಳ (ವಿಜಯಪುರ) : ಪಟ್ಟಣದ ಬಸವ ನಗರದಲ್ಲಿ ವ್ಯಕ್ತಿಯೊಬ್ಬರ ಕಟ್ಟಡದ ಮೇಲೆ ಖಾಸಗಿ ಕಂಪನಿಯ ಮೊಬೈಲ್ ಟವರ್ ನಿರ್ಮಾಣಕ್ಕೆ ಸ್ಥಳೀಯ ನಿವಾಸಿಗಳು ವಿರೋಧ ವ್ಯಕ್ತಪಡಿಸಿ ಮೊಬೈಲ್ ಟವರ್‌ದಿಂದಾಗುವ ಅಪಾಯದ ಕುರಿತು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಪಟ್ಟಣದ ಹೆಸ್ಕಾಂ ಎದುರಿಗೆ ಇರುವ ಕಟ್ಟಡದ ಮೇಲೆ ಟವರ್ ನಿರ್ಮಾಣಕ್ಕೆ ಕೆಲಸ ನಡೆದಿದ್ದು ತಕ್ಷಣ ಇದನ್ನು ನಿಲ್ಲಿಸಬೇಕು ಎಂದು ನಿವಾಸಿಗಳು ಆಗ್ರಹಿಸಿ ಪುರಸಭೆಗೆ ಮನವಿ ಪತ್ರ ಸಲ್ಲಿಸಿದ್ದರು.
ಮನವಿಯಲ್ಲಿ ಖಾಸಗಿ ಕಂಪನಿಯ ಮೊಬೈಲ್ ಟವರ್ ಶಬ್ಬೀರ್ ಮೋಮಿನ ಅವರ ಮಾಲೀಕತ್ವದ ಸರ್ವೆ ನಂ.1866/ಅ ಇದರಲ್ಲಿ ಸ್ಥಾಪಿಸಲಾಗುತ್ತಿದ್ದು, ಈ ಸ್ಥಳವು ಜನನಿಬಿಡ ಹಾಗೂ ಜನವಸತಿ ಪ್ರದೇಶವಾಗಿದೆ.
ಟವರ್ ಸ್ಥಾಪಿಸಲು ಉದ್ದೇಶಿಸಿರುವ ಸ್ಥಳದ 50 ಮೀಟರ ಪಶ್ಚಿಮಕ್ಕೆ ಜ್ಞಾನ ಭಾರತಿ ಶಾಲೆ ಪೂರ್ವದ 50 ಮೀಟರ್‌ದಲ್ಲಿ ಟಿಎಸ್‌ಎಸ್ ಶಾಲೆ ಇದೆ. ಸ್ಥಳಕ್ಕೆ ಭೇಟಿ ನೀಡಿದ್ದ ಪುರಸಭೆ ಜೆಇ ಭೀಮನಗೌಡ ಬಗಲಿ, ಕಂದಾಯ ಅಧಿಕಾರಿ ಎಂ ಬಿ ಮಾಡಗಿ ನಿವಾಸಿಗಳ ಅಹವಾಲು ಆಲಿಸಿ ಮೊಬೈಲ್ ಟವರ್ ಕೆಲಸ ಸ್ಥಗಿತಗೊಳಿಸುವಂತೆ ಕಟ್ಟಡದ ಮಾಲೀಕರಿಗೆ ಸೂಚಿಸಿದರು.
ಈ ವೇಳೆ ಸ್ಥಳದಲ್ಲಿದ್ದ ನಿವಾಸಿಗಳು ಕಟ್ಟಡ ಮಾಲಿಕನ ಮಧ್ಯೆ ವಾಗ್ವಾದ ನಡೆಯಿತು. ಮನವಿ ಪತ್ರಕ್ಕೆ ನಿವಾಸಿಗಳಾದ ಎಸ್ ಎ ಚೌಹಾಣ್, ಎಸ್ ಹೆಚ್ ಬಾಬಣ್ಣವರ, ಮಾಜಿ ಸೈನಿಕ ಎಸ್ ಕೆ ಕತ್ತಿ, ಎಸ್ ಬಿ ನಾಲತವಾಡ, ಆಶೀಫ್ ಮೋಮಿನ್, ಎಸ್ ಸಿ ಸಿಂಧೆ,ಎಂ ಬಿ ಉಪಾಧ್ಯೆ, ನೀಲಪ್ಪ ಲಮಾಣಿ, ಬಸಮ್ಮ ವಾಲೀಕಾರ ಮತ್ತಿತರರು ಸಹಿ ಮಾಡಿ ಸಲ್ಲಿಸಿದರು.