ವಿಜಯಪುರ: ಯುವಕನೊಬ್ಬನಿಗೆ ಫೇಸ್ಬುಕ್ ನಲ್ಲಿ ಪರಿಚಯವಾದ ಯುವತಿ ಮಾಡಿದ ದೋಖಾ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಆ ಯುವತಿ ಯಾರು ಎಂಬುದನ್ನು ಪತ್ತೆ ಹಚ್ಚಲು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಶೇಷ ತಂಡ ರಚನೆ ಮಾಡಿದ್ದಾರೆ. ಈ ತಂಡ ಸಾಮಾಜಿಕ ಜಾಲತಾಣದ ಮೂಲಕ ಯುವತಿಯ ಪತ್ತೆಗೆ ಜಾಲ ಬೀಸಿದ್ದಾರೆ.
ಫೇಸ್ ಬುಕ್ ಅಕೌಂಟ್ ಮೂಲಕ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಯುವಕನ ಸ್ನೇಹ ಸಂಪಾದಿಸಿದ್ದ ಯುವತಿ, ನಿಜವಾಗಲೂ ಯುವತಿಯೇ ಅನ್ನುವ ಅನುಮಾನ ಪೊಲೀಸರನ್ನು ಕಾಡುತ್ತಿದೆ. ಯುವಕನಿಂದ ನಿತ್ಯ ಒಂದೊಂದು ಬೇಡಿಕೆ ಇಟ್ಟು ಆತನಿಂದ ಸುಮಾರು 39 ಲಕ್ಷ ರೂಪಾಯಿ ಹಣ ಪಡೆದು ವಂಚನೆ ಮಾಡಿರುವ ಬಗ್ಗೆ ಸದ್ಯ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಹಿನ್ನೆಲೆ: ಜಿಲ್ಲೆಯ ಸಿಂದಗಿ ತಾಲೂಕಿನ ಬಗಲೂರು ಗ್ರಾಮದ ಪರಮೇಶ್ವರ ನಾನಾಗೌಡ ಹಿಪ್ಪರಗಿ ಎಂಬವರಿಗೆ ಯುವತಿ ಸುರೇಖಾ (ಹೆಸರು ಬದಲಿಸಲಾಗಿದೆ) 2022 ಜೂನ್ 29 ರಂದು ಪ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಳು. ಆತ ರಿಕ್ವೆಸ್ಟ್ ಸ್ವೀಕರಿಸಿದ್ದು, ನಂತರ ಫೇಸ್ಬುಕ್ನಲ್ಲಿ ಚಾಟಿಂಗ್ ಆರಂಭವಾಗಿತ್ತು. 2022 ಅಗಸ್ಟ್ 14ರಂದು ಯುವತಿ ಮೆಸೇಜ್ ಮಾಡಿ, ತಾಯಿಗೆ ಆರೋಗ್ಯ ಸರಿಯಿಲ್ಲ.
700 ರೂಪಾಯಿ ಫೋನ್ ಪೇ ಮಾಡುವಂತೆ ಮನವಿ ಮಾಡಿದ್ದಳು. ಅದರಂತೆ ಆಕೆಯನ್ನು ನಂಬಿ ದುಡ್ಡು ಹಾಕಿದ್ದನು. ಹೀಗೆ ಪ್ರತಿ ಸಲ ಏನಾದರೊಂದು ನೆಪ ಹೇಳಿ ಫೋನ್ ಪೇ ಮಾಡಿಸಿಕೊಂಡಿದ್ದಾಳೆ.
ಆ ಬಳಿಕ ಹೊಸ ನಾಟಕ ಆರಂಭಿಸಿ, ನಾನು ಐಎಎಸ್ ಪರೀಕ್ಷೆ ಪಾಸಾಗಿದ್ದೇನೆ. ಹಾಸನದಲ್ಲಿ ಡಿಸಿ ಹುದ್ದೆ ಸಿಗುತ್ತಿದೆ ಎಂದು ಮತ್ತೆ ಸುಳ್ಳಿನ ಕಂತೆ ಕಟ್ಟಿದ್ದಾಳೆ. ಬಳಿಕ 50 ಸಾವಿರ ರೂಪಾಯಿಯನ್ನು ಅಕೌಂಟ್ಗೆ ಹಾಕಿಸಿಕೊಂಡಿದ್ದಾಳೆ. ಮುಂದೆ ಸಲುಗೆಯಿಂದಲೇ ಮಾತನಾಡಿ ಮದುವೆಯಾಗೋಣವೆಂದೆಲ್ಲಾ ಹೇಳಿದ್ದಳು.
ಇದೇ ರೀತಿ ಹಂತ ಹಂತವಾಗಿ 40,86,800 ಲಕ್ಷ ಆಕೆಗೆ ನೀಡಿದ್ದಾನೆ. ಪುನಃ 40 ಸಾವಿರ ಹಾಕಿದ್ದು, ಅದರಲ್ಲಿ 2,21,980 ಲಕ್ಷ ರೂಪಾಯಿ ಆಕೆ ವಾಪಸ್ ಮಾಡಿದ್ದಳು. ಈ ರೀತಿ ಪದೇ ಪದೇ ಹಣ ಕೇಳುತ್ತಿರುವ ಕಾರಣ ಸಂಶಯಗೊಂಡ ಪರಮೇಶ್ವರ ತನ್ನ ಕುಟುಂಬಕ್ಕೆ ಈ ವಿಷಯ ತಿಳಿಸಿದ್ದನು. ಆಕೆಯ ಅಕೌಂಟ್, ಪೋನ್ ನಂಬರ್ ಚಾಲ್ತಿಯಲ್ಲಿ ಇರುವವರೆಗೆ 39,04,870 ಲಕ್ಷ ರೂಪಾಯಿ ಹಣವನ್ನು ನೀಡಿದ್ದು, ಆನ್ಲೈನ್ ವಂಚನೆಗೊಳಗಾಗಿದ್ದಾನೆ. ಈ ಕುರಿತು ಪರಮೇಶ್ವರ ದೂರು ದಾಖಲಿಸಿದ್ದರು. ವಂಚನೆಗೊಳಗಾದ ಯುವಕ ಪರಮೇಶ್ವರ ಹಿಪ್ಪರಗಿ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದಾನೆ.
ಇದನ್ನೂ ಓದಿ:ಅಧಿಕಾರಿಗಳ ಹೆಸರಿನಲ್ಲಿ ಹಣ ವಸೂಲಿ: 7 ಮಂದಿ ಆರೋಪಿಗಳ ಬಂಧನ