ಮುದ್ದೇಬಿಹಾಳ (ವಿಜಯಪುರ) : ಒಂದೆಡೆ ಕೊರೊನಾ ಹಾವಳಿಯಿಂದ ಈರುಳ್ಳಿಗೆ ಮಾರುಕಟ್ಟೆ ಇಲ್ಲ, ಮತ್ತೊಂದೆಡೆ ಸತತ ಮಳೆಯಿಂದ ಹೊಲದಲ್ಲಿಯೇ ಬೆಳೆ ಕೊಳೆಯುತ್ತಿರುವುದು ರೈತರನ್ನು ಸಂಕಷ್ಟಕ್ಕೀಡು ಮಾಡಿದೆ. ಮುದ್ದೇಬಿಹಾಳ ತಾಲೂಕಿನ ಮಲಗಲದಿನ್ನಿ ಗ್ರಾಮಕ್ಕೆ ಹೋಗುವ ರಸ್ತೆಯ ಅಕ್ಕಪಕ್ಕದಲ್ಲಿ ಈರುಳ್ಳಿ ಬೆಳೆದಿರುವ ರೈತರು ಸದ್ಯಕ್ಕೆ ಬಿತ್ತನೆ ಮಾಡಿರುವ ಖರ್ಚಾದ್ರೂ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.
ತಾಲೂಕಿನ ಮಲಗಲದಿನ್ನಿ ಗ್ರಾಮದ ಬಸವರಾಜ ನೆರಬೆಂಚಿ ಅವರು ತಮ್ಮ ಎರಡುವರೆ ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆದಿದ್ದರು. ಕಳೆದ ಹದಿನೈದು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕೈಗೆ ಬಂದಿರುವ ಫಸಲು ಮಾರಾಟಕ್ಕೆ ಒಯ್ಯಲು ಆಗದಂತಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಹೊಲದಲ್ಲಿ ನೀರು ನಿಂತು ಬೆಳೆ ಕೊಳೆಯಲು ಆರಂಭಿಸಿದೆ. ಇದರಿಂದ ಚಿಕ್ಕ ಪ್ರಮಾಣದಲ್ಲಿರುವ ಈರುಳ್ಳಿ ಗಡ್ಡೆಗಳನ್ನು ಕಿತ್ತು ಹೊರ ಹಾಕುತ್ತಿದ್ದಾರೆ. ಸಂಗ್ರಹಾರಗಳಲ್ಲಿಟ್ಟಿದ್ದ ಈರುಳ್ಳಿ ಇಟ್ಟಲ್ಲಿಯೇ ಮೊಳಕೆ ಒಡೆದಿದ್ದು, ಅದು ಮಾರಾಟಕ್ಕೆ ಬಾರದಂತಾಗಿದೆ.
ಒಳ್ಳೆಯ ಈರುಳ್ಳಿ ವಿಂಗಡಣೆ : ಸಂಗ್ರಹಾರಗಳಲ್ಲಿ ಕೊಳೆತ ಮತ್ತು ಚೆನ್ನಾಗಿರುವ ಈರುಳ್ಳಿ ಬೇರ್ಪಡಿಸಲು ರೈತರು ಕೂಲಿಕಾರರನ್ನು ತೆಗೆದುಕೊಂಡು ಕೆಲಸ ಮಾಡಿಸುತ್ತಿದ್ದಾರೆ. ಪ್ರತಿಯೊಬ್ಬ ಕೂಲಿಕಾರರಿಗೆ 200 ರೂ.ಗಳಂತೆ ಕೊಡುತ್ತಿದ್ದು, 10-12 ಕೂಲಿಕಾರರು ಹದಿನೈದು ದಿನಗಳಿಂದ ಕೆಲಸಕ್ಕೆ ಬರುತ್ತಿದ್ದಾರೆ ಎಂದು ಈರುಳ್ಳಿ ಬೆಳೆಗಾರ ಬಸವರಾಜ ನೆರಬೆಂಚಿ ಹೇಳುತ್ತಾರೆ.
ಉಳ್ಳಾಗಡ್ಡಿ ಧಾರಣೆ ಇಲ್ಲ: ಬೆಳೆದಿದ್ದ ಉಳ್ಳಾಗಡ್ಡಿ ಹೊಲದಲ್ಲಿ ಕೊಳೆಯುತ್ತಿದ್ದು, ಅರ್ಧ ರಾಡಿಯಲ್ಲಿ, ಅರ್ಧ ಹೊಲದಲ್ಲಿ ಬಿದ್ದಿದ್ದನ್ನು ನೋಡಿ ಮನಸ್ಸಿಗೆ ನೋವಾಗುತ್ತಿದೆ. ಅದರಲ್ಲಿಯೇ ಒಳ್ಳೆಯ ಉಳ್ಳಾಗಡ್ಡಿಯನ್ನು ಬೇರೆ ಮಾಡುತ್ತಿದ್ದೇವೆ. ದೊಡ್ಡ ಗಡ್ಡಿಗೆ 2000 ರೂ. ಸಣ್ಣ ಗಡ್ಡಿಗೆ 1000 ರೂ. ಕ್ವಿಂಟಾಲ್‌ನಂತೆ ಮಾರಾಟವಾಗುತ್ತಿದೆ. ಉಳ್ಳಾಗಡ್ಡಿ ಬೆಳೆಯುವ ವೇಳೆ ಟ್ರ್ಯಾಕ್ಟರ್ ಬಾಡಿಗೆ, ಕೂಲಿ, ಔಷಧ ಎಂದು ದಿನಕ್ಕೆ 3000 ರೂ. ಕೊಟ್ಟಿದ್ದೇವೆ. ಈಗ ಕೊರೊನಾ ನೆಪದಿಂದ ಬೆಲೆಯೂ ಇಲ್ಲ. ತಾವು ಹೇಗೆ ಬದುಕಬೇಕು ಎಂದು ರೈತ ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ.