ಮುದ್ದೇಬಿಹಾಳ: ತಾನು ಬೆಳೆದ ಪಪ್ಪಾಯ ಹಣ್ಣನ್ನು ಮನೆ ಮನೆಗೂ ಮಾರಾಟ ಮಾಡಿ ಕೈ ತುಂಬಾ ಹಣ ಗಳಿಸುವುದು ಹೇಗೆ ಎಂಬದನ್ನು ಹೊಸ ಉಪಾಯದ ಮೂಲಕ ತಾಲೂಕಿನ ಬಸರಕೋಡ ಗ್ರಾಮದ ಯುವ ರೈತನೊಬ್ಬ ತೋರಿಸಿಕೊಟ್ಟಿದ್ದಾನೆ.
ಕೊರೊನಾ ವೈರಸ್ ಬಂದ ವೇಳೆ ತಮ್ಮ ಹೊಲ, ತೋಟದಲ್ಲಿ ಬೆಳೆದಿರುವ ತರಕಾರಿ, ಹಣ್ಣು ಮತ್ತಿತರ ಉತ್ಪನ್ನಗಳನ್ನು ಹೇಗೆ ಮಾರಬೇಕು ಎಂಬುದು ತಿಳಿಯದೇ ಸಾಕಷ್ಟು ರೈತರು ನಷ್ಟ ಅನುಭವಿಸುತ್ತಿದ್ದಾರೆ. ಆದರೆ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ತಾಲೂಕಿನ ಬಸರಕೋಡ ಗ್ರಾಮದ ಯುವ ರೈತನೊಬ್ಬ ತಾನು ಬೆಳೆದ ಪಪ್ಪಾಯ ಹಣ್ಣನ್ನು ಮನೆ ಮನೆಗೂ ಮಾರಾಟ ಮಾಡಿ ಕೈ ತುಂಬಾ ಹಣ ಗಳಿಸುತ್ತಿದ್ದಾನೆ.
ಬಸರಕೋಡದ ಚನ್ನಬಸ್ಸು ಯಾಳವಾರ ಎಂಬ ರೈತ ತನ್ನಲ್ಲಿರುವ ಬೈಕ್ಗೆ ಎರಡು ಗಾಲಿಯ ತಳ್ಳುಗಾಡಿ ಜೋಡಿಸಿಕೊಂಡು ಅದರಲ್ಲಿ ಐದಾರು ಟ್ರೇಯಲ್ಲಿ ಪಪ್ಪಾಯ ತುಂಬಿಕೊಂಡು ಮಾರಾಟಕ್ಕೆ ಒಯ್ಯುತ್ತಿದ್ದಾನೆ. ಪಟ್ಟಣದ ವಿವಿಧ ವಾರ್ಡ್ಗಳಿಗೆ ಸಂಚರಿಸಿ ಗ್ರಾಹಕರಿಗೆ ನೇರವಾಗಿಯೇ ಹಣ್ಣನ್ನು ತಲುಪಿಸುತ್ತಿದ್ದಾನೆ.
ಎಷ್ಟೋ ಯುವಕರು ತಮಗೆ ಕೆಲಸವಿಲ್ಲ ಎಂದು ಕೈಕಟ್ಟಿ ಹಳ್ಳಿಯಲ್ಲಿ, ಪಟ್ಟಣದಲ್ಲಿ ಸುತ್ತಾಡುತ್ತಾ ಕಾಲ ಹರಣ ಮಾಡುತ್ತಿದ್ದಾರೆ. ಆದರೆ ಈ ಯುವಕ ಸಾಮಾಜಿಕ ಅಂತರವನ್ನೂ ಕಾಯ್ದುಕೊಂಡು ಹಣ್ಣು ವ್ಯಾಪಾರ ಮಾಡುತ್ತಿದ್ದಾನೆ. ಅಲ್ಲದೇ ರೈತ ತಾನು ಬೆಳೆದ ಬೆಳೆಗೆ ಸೂಕ್ತ ಬೆಲೆಯನ್ನು ತಾನೇ ನಿಗದಿ ಮಾಡಿ ಮಾರಾಟ ಮಾಡುತ್ತಿದ್ದಾನೆ.
ನಾನು ಅಷ್ಟು ಕಲಿತಿದ್ದೇನೆ, ಬೈಕ್ ಮೇಲೆ ಹೇಗೆ ಹಣ್ಣು, ತರಕಾರಿ ಮಾರಾಟ ಮಾಡಲಿ ಎಂದು ದಿನಗಳನ್ನು ದೂಡುತ್ತಾ ಹೋದರೆ ಮನೆಯಲ್ಲಿ ಎಲ್ಲರಿಂದಲೂ ನಿಂದನೆ ತಪ್ಪದು. ಸ್ವಾಭಿಮಾನದಿಂದ ಹೊಸ ಐಡಿಯಾ ಮಾಡಿ ಗ್ರಾಮೀಣ ಪ್ರದೇಶದ ಜನ ಯಾವುದರಲ್ಲಿಯೂ ಕಮ್ಮಿ ಇಲ್ಲ ಎಂಬುದನ್ನು ತೋರಿಸಿಕೊಡುವ ಸಂದರ್ಭ ಎದುರಾಗಿದೆ. ಈ ಮೂಲಕ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಬೇಕಿದೆ ಎಂದು ರೈತ ಚನ್ನಬಸ್ಸು ಯಾಳವಾರ ಹೇಳಿದ್ದಾರೆ.