ವಿಜಯಪುರ : ಹೊಸ ಮನೆ ಕಟ್ಟಿದರೆ ನಮ್ಮ ಧರ್ಮದ ಸಂಪ್ರದಾಯದಂತೆ ನೂತನ ಮನೆಯ ಗೃಹ ಪ್ರವೇಶ ಮಾಡುವುದನ್ನು ನಾವೆಲ್ಲ ಕಂಡಿದ್ದೇವೆ, ನೋಡಿದ್ದೇವೆ. ಆದರೆ, ಇಲ್ಲೊಬ್ಬ ಮುಸ್ಲಿಂ ಶಿಕ್ಷಕ ತಮ್ಮ ನೂತನ ಮನೆಯ ಗೃಹಪ್ರವೇಶವನ್ನು ಹಿಂದೂ ಸಂಪ್ರದಾಯದ ವಿಧಿ ವಿಧಾನಗಳಂತೆ ಮಾಡಿಸುವ ಮೂಲಕ ಹಿಂದೂ-ಮುಸ್ಲಿಂ ಸಾಮರಸ್ಯ ಸಾರಿದ್ದಾರೆ.
ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಗ್ರಾಮದ ನಿವಾಸಿ ಲಾಲ್‌ಸಾಬ ಹುಸೇನಸಾಬ ನದಾಫ್ ಎಂಬುವರೇ ತಮ್ಮ ಹೊಸ ಮನೆಯ ಗೃಹ ಪ್ರವೇಶವನ್ನು ವಿಶೇಷವಾಗಿ ಹಿಂದೂ ಧರ್ಮದಂತೆ ನೆರವೇರಿಸಿದ್ದಾರೆ. ಇವರು ಕಳೆದ 15 ವರ್ಷಗಳಿಂದ ಗ್ರಾಮದ ಎಸ್‌ಡಿಕೆ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಈ ಕಾರ್ಯ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಮೂಲತಃ ಸರೂರ ಗ್ರಾಮದ ಲಾಲ್‌ಸಾಬ ಹುಸೇನಸಾಬ ನದಾಫ್ ಅವರು ತಮ್ಮ ತಂದೆಯವರಂತೆ ಈ ಸಂಪ್ರದಾಯ ಪಾಲಿಸಿಕೊಂಡು ಬಂದಿದ್ದಾರೆ. ಮನೆಯ ಗೃಹಪ್ರವೇಶದ ದಿನದಂದು ನವಗ್ರಹಗಳನ್ನು ಸ್ಥಾಪಿಸಿ ಒಂಭತ್ತು ವಿಧದ ಧಾನ್ಯಗಳ ರಂಗೋಲಿ ಹಾಕಿ ಅರ್ಚಕರಿಂದ ವಿಶೇಷ ಪೂಜೆ ಮಾಡಿಸಿದ್ದಾರೆ. ಅಲ್ಲದೇ ಇನ್ನೊಂದು ಕೊಠಡಿಯಲ್ಲಿ ಶಿವ, ಪಾರ್ವತಿ,ಗಣೇಶ ಮೂರ್ತಿಗಳನ್ನೂ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ್ದಾರೆ. ಪೂಜೆಯಲ್ಲಿ ಶಿಕ್ಷಕರ ತಾಯಿ ಅಮೀನಮಾ ನದಾಫ್, ಪತ್ನಿ ರಿಯಾನ ಬೇಗಂ ನದಾಫ, ಮಕ್ಕಳಾದ ಹುಸೇನಸಾಬ, ಷರೀಫಸಾಬ ಹಾಗೂ ಸಾನಿಯಾ ಪಾಲ್ಗೊಂಡಿದ್ದರು.
ಲಾಲ್‌ಸಾಬ ಅವರು ಇಸ್ಲಾಂ ಧರ್ಮೀಯ. ಹಿಂದೂ ಧರ್ಮೀಯರ ವಿಧಿ ವಿಧಾನಗಳಂತೆ ಪೂಜೆ ಮಾಡಿಸಿರುವುದು ನಮ್ಮಲ್ಲೂ ಅವರ ಬಗ್ಗೆ ಗೌರವದ ಭಾವನೆ ಹೆಚ್ಚುವಂತೆ ಮಾಡಿದೆ. ಸೌಹಾರ್ದತೆಗೆ ನಮ್ಮ ಜಿಲ್ಲೆ ಹೆಸರುವಾಸಿ ಎಂಬುದಕ್ಕೆ ಇದೇ ನಿದರ್ಶನ ಎಂದು ಶಿಕ್ಷಣ ಸಂಸ್ಥೆಯ ಶಿಕ್ಷಕ ವೃಂದ ಮೆಚ್ಚುಗೆ ವ್ಯಕ್ತಪಡಿಸಿದೆ.