ವಿಜಯಪುರ: ರಾಜ್ಯದಲ್ಲಿ ಮಾದಕ ದ್ರವ್ಯ ವಿಷಯವನ್ನೇ ದೊಡ್ಡ ಸಮಸ್ಯೆಯನ್ನಾಗಿ ಬಿಂಬಿಸಲಾಗುತ್ತಿದೆ. ದೇಶದಲ್ಲಿ ಕೊರೊನಾ ವೈರಸ್, ಚೀನಾ ಗಡಿ ಸಂಘರ್ಷ ಹಾಗೂ ಜಿಡಿಪಿ ಪಾತಾಳಕ್ಕೆ ಕುಸಿದಿರುವಾಗ ಅದರ ಬಗ್ಗೆ ಗಮನಹಿಸುವುದನ್ನು ಬಿಟ್ಟು ಬೇಡದಿರುವ ವಿಷಯವನ್ನು ದೊಡ್ಡದಾಗಿ ಬಿಂಬಿಸಲಾಗುತ್ತಿದೆ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ ಆತಂಕ ವ್ಯಕ್ತಪಡಿಸಿದರು.
ಮಖಣಾಪುರ ಕೆರೆಗೆ ಬಾಗಿನ ಅರ್ಪಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೊನಾ ವೈರಸ್ನಿಂದ 50 ಲಕ್ಷಕ್ಕೂ ಹೆಚ್ಚು ಜನ ಸಂಕಷ್ಟ ಅನುಭವಿಸುತ್ತಿದ್ದಾರೆ. ಲಕ್ಷಕ್ಕೂ ಅಧಿಕ ಜನ ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿಯೇ ನಿತ್ಯ 10ಸಾವಿರ ಜನರಿಗೆ ಕೊರೊನಾ ಸೋಂಕು ತಗುಲುತ್ತಿದೆ. ಇಂಥ ಸ್ಥಿತಿಯಲ್ಲಿ ಸ್ಯಾಂಡಲ್ವುಡ್ ಗೆ ಡ್ರಗ್ಸ್ ದಂಧೆಯ ಕಳಂಕ ಅಂಟಿಕೊಂಡಿದೆ. ಇದನ್ನೇ ಮಾಧ್ಯಮಗಳಲ್ಲಿ ಬಿತ್ತರಿಸಲಾಗುತ್ತಿದೆ. ಇದನ್ನೆಲ್ಲಾ ನೋಡಿದರೆ ಸಮಾಜ ಯಾವ ದಾರಿಗೆ ಹೋಗುತ್ತಿದೆ ಎನ್ನುವುದನ್ನು ಎಲ್ಲರೂ ಅರಿಯಬೇಕು ಎಂದರು.
ಮಾದಕ ದ್ರವ್ಯ ದಂಧೆ ಸಣ್ಣದಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದೆ. ಅದಕ್ಕೆ ಪೊಲೀಸರು ಇದ್ದಾರೆ. ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಾರೆ. ಅದರ ಬದಲಿಗೆ ದೇಶದಲ್ಲಿ ಕೊರೊನಾದಿಂದ ಆಗುತ್ತಿರುವ ಕಷ್ಟದ ಬಗ್ಗೆ ಚಿಂತಿಸಬೇಕಾಗಿದೆ ಎಂದು ಎಂ ಬಿ ಪಾಟೀಲ್ ಹೇಳಿದ್ರು.
ರಾಜ್ಯ ಸರ್ಕಾರ ಸಹ ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಕಳೆದ ಬಾರಿ ಉಂಟಾಗಿದ್ದ ಪ್ರವಾಹ ಪರಿಸ್ಥಿತಿಯಲ್ಲಿ ನಷ್ಟ ಅನುಭವಿಸಿದವರಿಗೆ ಸರಿಯಾಗಿ ಪರಿಹಾರ ನೀಡಿಲ್ಲ. ಕೊಟ್ಟಿರುವ ಅಲ್ಪಸ್ವಲ್ಪ ಪರಿಹಾರವನ್ನು ಸಹ ಬಜೆಪಿ ಸರ್ಕಾರ ಸರಿಯಾಗಿ ಬಳಸಿಕೊಂಡಿಲ್ಲ ಎಂದು ಆರೋಪಿಸಿದರು.