ವಿಜಯಪುರ: ಮಹಾರಾಷ್ಟ್ರದಿಂದ ಹೆಚ್ಚುವರಿ ನೀರು ಹರಿ ಬಿಡುತ್ತಿರುವ ಹಿನ್ನೆಲೆ, ಭೀಮಾ ನದಿ ಪ್ರವಾಹದಿಂದ ನಡುಗಡ್ಡೆಯಾಗಿದ್ದ ಇಂಡಿ ತಾಲೂಕಿನ ಹಳೇ ಹಿಂಗಣಿ ಗ್ರಾಮದಲ್ಲಿ ಸಿಲುಕಿದ್ದ ತಾಯಿ-ಮಗನನ್ನು ಇಂದು ಸಂಜೆ ರಕ್ಷಣೆ ಮಾಡಲಾಗಿದೆ.
ನೀಲಾಬಾಯಿ ಸಂಗಣ್ಣ ಕೋಳಿ (100) ಹಾಗೂ ಶಿವಮಲ್ಲಪ್ಪ ಸಂಗಣ್ಣ ಕೋಳಿ (60) ಎಂಬ ತಾಯಿ-ಮಗ ಇಬ್ಬರು ಭೀಮಾ ಪ್ರವಾಹದಿಂದ ಹಳೇ ಹಿಂಗಣಿ ಗ್ರಾಮದ ಸುತ್ತಲು ನೀರು ಆವರಿಸಿದ್ದಕ್ಕೆ, ಭಯದಿಂದ ತಮ್ಮ ಪತ್ರಾಸ್ ಶೆಡ್ ಬಳಿಯ ಗಿಡದ ಬಳಿ ಕಂಗಾಲಾಗಿ ನಿಂತಿದ್ದರು. ಈ ಸುದ್ದಿ ತಿಳಿದ ಅಧಿಕಾರಿಗಳು ಸ್ಥಳಕ್ಕೆ ತೆರಳಿ, ತಾಯಿ-ಮಗನನ್ನು ರಕ್ಷಣೆ ಮಾಡಿದ್ದಾರೆ.
ರಸ್ತೆ ಸಂಪರ್ಕ ಕಡಿತ: ಔರಾದ-ಸದಾಶಿವಘಡ ರಾಜ್ಯ ಹೆದ್ದಾರಿ ಮೇಲೆ ಭೀಮಾ ನದಿಯ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ದೇವಣಗಾಂವ್-ಆಲಮೇಲೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ದೇವಣಗಾಂವ್ ಸಮೀಪದ ಅಪ್ಪಾರ ಹಳ್ಳದ ಮೇಲೆ ನೀರು ಬಂದು ಜಲಾವೃತವಾದ ಪರಿಣಾಮ ಕಲಬುರಗಿ ಜಿಲ್ಲೆಯ ಸಂಪರ್ಕ ಕಡಿತಗೊಂಡಿದೆ.