ಮುದ್ದೇಬಿಹಾಳ (ವಿಜಯಪುರ): ಪಟ್ಟಣದ ಆಶ್ರಯ ಕಾಲೊನಿಯಲ್ಲಿ ರಾಷ್ಟ್ರೀಯ ಡೆಂಗ್ಯೂ ರೋಗ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಕೀಟಶಾಸ್ತ್ರಜ್ಞ ರಿಯಾಜ್ ದೇವರಳ್ಳಿ ಮಾತನಾಡಿ, ಯಾವುದೇ ಜ್ವರ ಇದ್ದರೂ ಶೀಘ್ರವೇ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ರಕ್ತ ಪರೀಕ್ಷೆ ಮಾಡಿಸಿ ಉಚಿತ ಚಿಕಿತ್ಸೆ ಪಡೆಯಿರಿ ಎಂದು ಸೂಚನೆ ನೀಡಿದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಜೈಬುನಿಸಾ ಬೀಳಗಿ ಮಾತನಾಡಿ, ತಾಲೂಕಿನಾದ್ಯಂತ ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಮನೆಗಳಿಗೆ ಬಂದಾಗ ಸಾರ್ವಜನಿಕರು ಸಹಕಾರ ನೀಡಬೇಕು. ಮನೆಗಳಲ್ಲಿ ಲಾರ್ವಾ ಉತ್ಪತ್ತಿ ಆಗದಂತೆ ನೋಡಿಕೊಳ್ಳಬೇಕು ಎಂದರು. ಇದೇ ವೇಳೆ ಆಶ್ರಯ ಕಾಲೊನಿಯ ಸುಮಾರು 20 ಕುಟುಂಬದವರಿಗೆ ಸಾಂಕೇತಿಕವಾಗಿ ಸೊಳ್ಳೆ ಪರದೆಯನ್ನು ವಿತರಿಸಲಾಯಿತು. ಆದಷ್ಟು ಬೇಗ 600 ಮನೆಗಳಿಗೂ ಸೊಳ್ಳೆ ಪರದೆಯನ್ನು ವಿತರಿಸಲಾಗುವುದು ಎಂದು ಡಾ. ಬೀಳಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅನಸೂಯ ತೇರದಾಳ, ಎಸ್.ಎಸ್. ಮೇಟಿ, ಹಿರಿಯ ಪ್ರಯೋಗಾಲಯ ತಜ್ಞ ಈರಣ್ಣ ಚಿನಿವಾರ, ಹಿರಿಯ ಆರೋಗ್ಯ ಸಹಾಯಕ ಎಂ.ಎಸ್. ಗೌಡರ, ಶಿವು ಬೊಮ್ಮನಹಳ್ಳಿ, ಎಸ್.ಸಿ. ರುದ್ರವಾಡಿ, ಚರಲಿಂಗೇಶ ಬಿದರಕುಂದಿ ಹಾಗೂ ಅಂಗನವಾಡಿ ಆಶಾ ಕಾರ್ಯಕರ್ತೆಯರು ಹಾಜರಿದ್ದರು.