ಮುದ್ದೇಬಿಹಾಳ: ಮಹಾರಾಷ್ಟ್ರದಿಂದ ತಾಲೂಕಿಗೆ ಆಗಮಿಸಿರುವ ವಲಸೆ ಕಾರ್ಮಿಕರನ್ನು ಜಮ್ಮಲದಿನ್ನಿಯಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದ್ದು, ಭಾನುವಾರ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಕಾರ್ಮಿಕರಿಗೆ ಅಗತ್ಯ ವಸ್ತುಗಳನ್ನು ನೀಡಿದರು.
ಅಂದಾಜು 2500 ಕಾರ್ಮಿಕರು ಮತ್ತು ಅವರ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ಕೊಡುವುದಲ್ಲದೆ, ಸರ್ಕಾರ ಕೊಟ್ಟಿರುವ ಊಟದ ಜೊತೆಗೆ ತಮ್ಮಿಂದ ಸಾಧ್ಯವಾದಷ್ಟು ಮಟ್ಟಿಗೆ ಹೆಚ್ಚಿನ ದಾಸೋಹ ವ್ಯವಸ್ಥೆ ಕಲ್ಪಿಸಿದ್ದಾರೆ.
ಇನ್ನು ತಮ್ಮ ಸ್ವಂತ ಖರ್ಚಿನಲ್ಲಿ ಅಂದಾಜು 2000 ಕಾರ್ಮಿಕರಿಗೆ ಬಟ್ಟೆ ತೊಳೆಯುವ ಸೋಪು, ಸ್ನಾನಕ್ಕೆ ಬಳಸುವ ಡೆಟಾಲ್ ಸೋಪು, ಟೂತ್ ಪೇಸ್ಟ್, ಟೂತ್ ಬ್ರಶ್ ಹಾಗೂ 500ಕ್ಕೂ ಹೆಚ್ಚು ಮಕ್ಕಳಿಗೆ 15 ದಿನಕ್ಕಾಗುವಷ್ಟು ನಂದಿನಿ ಗುಡ್ ಲೈಫ್‌ನ ಟೆಟ್ರಾ ಪ್ಯಾಕೇಟ್ ಹಾಲು, ಮಕ್ಕಳಿಗೆ ಬಿಸ್ಕತ್, ಬ್ರೆಡ್, ಚಾಕೊಲೇಟ್ ನೀಡುವ ಮೂಲಕ ಶಾಸಕ ನಡಹಳ್ಳಿ ಮಾನವೀಯತೆ ಮೆರೆದಿದ್ದಾರೆ.
ರೊಟ್ಟಿ ಪೂರೈಕೆಗೂ ಕ್ರಮ: ಕ್ವಾರಂಟೈನ್ ಕೇಂದ್ರದಲ್ಲಿರುವ ಕಾರ್ಮಿಕರು ತಮಗೆ ಸರ್ಕಾರದಿಂದ ಕೊಡುತ್ತಿರುವ ಪಲಾವ್, ಉಪ್ಪಿಟ್ಟು ಸರಿ ಹೊಂದುತ್ತಿಲ್ಲ ಎಂದು ಶಾಸಕರ ಎದುರು ಗೋಳು ತೋಡಿಕೊಂಡಾಗ, ತಕ್ಷಣ ಅವರಿಗೆ ಬಸರಕೋಡದಿಂದ ರೊಟ್ಟಿ ತಯಾರಿಸಿ ಪೂರೈಸಲು ಶಾಸಕ ನಡಹಳ್ಳಿ ಮುಂದಾಗಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ಶಾಸಕರ ಪತ್ನಿ ಮಹಾದೇವಿ ಪಾಟೀಲ ನಡಹಳ್ಳಿ, ತಹಸೀಲ್ದಾರ್ ಜಿ.ಎಸ್.ಮಳಗಿ, ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ, ತಾಳಿಕೋಟಿ ಪಿಎಸ್ಐ ವಸಂತ ಬಂಡಗಾರ, ಮುದ್ದೇಬಿಹಾಳ ಪಿಎಸ್ಐ ಮಲ್ಲಪ್ಪ ಮಡ್ಡಿ, ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ ಮತ್ತಿತರರು ಇದ್ದರು.