ವಿಜಯಪುರ: ಸಿಎಂಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರ ಬರೆದ ಗುತ್ತಿಗೆದಾರರ ಕುರಿತು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದಾರೆ. ಗುತ್ತಿಗೆದಾರರು, ಸಿಎಂ ಹಾಗೂ ಮುಖ್ಯ ಕಾರ್ಯದರ್ಶಿಗಳ ಜೊತೆ ಕುಳಿತು ಮಾತನಾಡಬೇಕು. ತಮಗೆ ಯಾರು ತೊಂದರೆ ಕೊಡ್ತಿದ್ದಾರೆ ಅನ್ನೋದನ್ನು ಅವರ ಬಳಿ ಹೇಳಿಕೊಳ್ಳಬೇಕು, ಹಾದಿ ಬೀದಿಯಲ್ಲಿ ಹೇಳಿದ್ರೆ ಏನಾಗುತ್ತದೆ ಎಂದು ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲ ಗುತ್ತಿಗೆದಾರರು ಹಾದಿ ಬೀದಿಯಲ್ಲಿ ಹೇಳ್ತಿದ್ದಾರೆ. ಸಿಎಂ ಇದ್ದಾರೆ, ಸಿಎಂ ಎದುರು ಹೇಳಬೇಕು. ಸಿಎಂ ಅವರನ್ನು ನೇರವಾಗಿ ಭೇಟಿಯಾಗಿ. ಸಿಎಂ ಉದ್ಧಟತನದ ವರ್ತನೆ ತೋರುವುದಿಲ್ಲ. ಸುಮ್ಮನೆ ಗೂಬೆ ಕೂರಿಸುವ ಕೆಲಸವನ್ನು ಗುತ್ತಿಗೆದಾರರು ಮಾಡಬಾರದು. ಇದು ಪ್ರಚಾರಕ್ಕೆ ಮಾಡಿದ ಹಾಗೆ ಅಗುತ್ತದೆ. ನಿಜವಾಗಲೂ ಪರ್ಸೆಂಟೆಜ್ ಕೇಳಿದ್ರೆ, ನೇರವಾಗಿ ಸಿಎಂ ಭೇಟಿ ಮಾಡಿ ಎಂದು ಸಲಹೆ ನೀಡಿದರು.
ಗಣೇಶ ಮಂಟಪ ವಿಚಾರ: ಗಣೇಶ ಮಂಟಪಗಳಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಫೋಟೋ ಅಂಟಿಸುವುದಾಗಿ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದರು. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಯತ್ನಾಳ್, ಬುದ್ಧ, ಬಸವ, ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ, ವೀರ್ ಸಾವರ್ಕರ್ ಎಲ್ಲರ ಫೋಟೋ ಹಾಕಲಿ. ಗಣೇಶ ಮಂಟಪದಲ್ಲಿ ಇವರ ಫೋಟೋ ಹಾಕಿದ್ರೆ ತಪ್ಪೇನಿಲ್ಲ. ಅದನ್ನು ನಾನು ಸ್ವಾಗತಿಸುತ್ತೇನೆ ಎಂದರು.
ಸಮುದಾಯಗಳಿಗೆ ಮೀಸಲಾತಿ: ಪಂಚಮಸಾಲಿ ಸೇರಿದಂತೆ ಹಲವು ಸಮುದಾಯಗಳಿಗೆ ಮೀಸಲಾತಿ ನೀಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶಾಸಕ ಯತ್ನಾಳ್, ಪುನರ್ ಮೀಸಲಾತಿಯನ್ನು ಪರಿಶೀಲನೆ ಮಾಡುವುದಾಗಿ ಸಿಎಂ ಈಗಾಗಲೇ ಎರಡು ಬಾರಿ ನನಗೆ ಹೇಳಿದ್ದಾರೆ. ಕೇವಲ ಪಂಚಮಸಾಲಿ ಮಾತ್ರವಲ್ಲದೆ, ಕೇಂದ್ರದಲ್ಲಿ ಲಿಂಗಾಯತ ಸಮಾಜವನ್ನು ಒಬಿಸಿಗೆ ಸೇರಿಸುವುದು, ಕುರುಬ ಸಮಾಜವನ್ನು ಎಸ್ ಟಿಗೆ ಸೇರಿಸುವುದು, ಎಸ್ ಟಿ ಮೀಸಲಾತಿ ಹೆಚ್ಚಿಸುವುದು. ಈ ವಿಚಾರಗಳು ಸೇರಿದಂತೆ ಎಲ್ಲವನ್ನೂ ಪರಿಶೀಲನೆ ನಡೆಸಿ, ತಾವು ಸಿಎಂ ಇರುವುದರೊಳಗಾಗಿಯೇ ಸೂಕ್ತ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಗಣೇಶನ ಮೂರ್ತಿ ವಿಸರ್ಜನೆ: ವಿಜಯಪುರ ನಗರದ ತಾಜ್ ಬಾವಡಿಯಲ್ಲಿ ಗಣೇಶನ ಮೂರ್ತಿ ನಿಮಜ್ಜನ ಮಾಡುವ ವಿಚಾರವಾಗಿ ಮಾತನಾಡಿದ ಯತ್ನಾಳ್, ತಾಜ್ ಬಾವಡಿಯಲ್ಲಿ ಯಾವುದೇ ಕಾರಣಕ್ಕೂ ಗಣೇಶನ ಮೂರ್ತಿಗಳನ್ನು ನಿಮಜ್ಜನ ಮಾಡಲು ನಾ ಬಿಡಲ್ಲಾ. ಯಾರೇ ತಾಜ್ ಬಾವಡಿಯಲ್ಲಿ ಗಣೇಶನ ಮೂರ್ತಿಗಳನ್ನು ನಿಮಜ್ಜನ ಮಾಡಿದರೆ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಗಣೇಶನ ಮೂರ್ತಿಗಳನ್ನು ನಿಮಜ್ಜನ ಮಾಡಿದವರ ಮೇಲೆ ಗೂಂಡಾ ಕಾಯ್ದೆ ಹಾಕಲಾಗುತ್ತದೆ ಎಂದು ಯತ್ನಾಳ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಕಮಿಷನ್ ಆರೋಪ ಬಗ್ಗೆ ಸರ್ಕಾರದ ವಿರುದ್ಧ ನ್ಯಾಯಾಂಗ ತನಿಖೆ ಮಾಡಿ: ಸಿದ್ದರಾಮಯ್ಯ ಆಗ್ರಹ
ಸಿದ್ದರಾಮಯ್ಯ ಭೇಟಿ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ರಂಭಾಪುರಿ ಶ್ರೀಗಳನ್ನು ಭೇಟಿ ಮಾಡಿದ ವಿಚಾರವಾಗಿ ಮಾತನಾಡಿದ ಯತ್ನಾಳ್, ಯಾಕೆ ಸಿದ್ದರಾಮಯ್ಯ ಸ್ವಾಮೀಜಿಗಳನ್ನು ಭೇಟಿ ಮಾಡಬಾರದು. ಅವರು ರಾಜ್ಯದ ಓರ್ವ ಜನಪ್ರತಿನಿಧಿ ಇದ್ದಾರೆ. ಎಲ್ಲಾ ಮಠಾಧೀಶರ ಬಳಿ ಹೋಗುವ ಅಧಿಕಾರ ಅವರಿಗಿದೆ. ಇದರಿಂದ ಸಮುದಾಯಗಳ ನಡುವಿನ ದ್ವೇಷ ಮನೋಭಾವ ಕಡಿಮೆ ಆಗುತ್ತದೆ ಎಂದರು.
ಈ ಹಿಂದೆ ಸಿದ್ದರಾಮಯ್ಯ ಪೇಜಾವರ ಶ್ರೀಗಳ ಬಗ್ಗೆ ಮಾತನಾಡಿದ್ರು, ಬಳಿಕ ಕ್ಷಮೆ ಕೇಳಿದ್ರು. ಪೇಜಾವರ ಶ್ರೀಗಳನ್ನು ಕರೆದುಕೊಂಡು ಹೋಗಿ ಸಿದ್ದರಾಮಯ್ಯ ತಮ್ಮ ಮನೆಯಲ್ಲೇ ಕೃಷ್ಣನ ಪೂಜೆ ಮಾಡಿಸಿದ್ರು. ಸಮಾಜದಲ್ಲಿ ಪರಿವರ್ತನೆ ಆಗ್ತಿದೆ. ಯಾಕೆಂದರೆ ದೇಶದಲ್ಲಿ ಜನತೆ ಜಾಗೃತರಾಗ್ತಿದ್ದಾರೆ ಎಂದರು.