ಮುದ್ದೇಬಿಹಾಳ : ಕ್ಷೇತ್ರದ ಜನತೆ ಸದ್ಯಕ್ಕೆ ನನಗೆ ಅಧಿಕಾರ ನೀಡಿದ್ದಾರೆ. ಮಾಜಿ ಶಾಸಕರು ಇಪ್ಪತೈದು ವರ್ಷ ಕ್ಷೇತ್ರವನ್ನು ಪ್ರತಿನಿಧಿಸಿದ್ದು, ಇಷ್ಟು ವರ್ಷ ಅನುಭವ ಇರುವ ಮುತ್ಸದ್ದಿಗಳು ಕ್ಷೇತ್ರದ ಜನರಿಗೆ ತಿರುಚಿ ಹೇಳುವುದನ್ನು ಕೈ ಬಿಡಬೇಕು. ಐದು ವರ್ಷ ಕಾಯ್ದರೆ ಮತ್ತೆ ಜನರೇ ತೀರ್ಪು ಕೊಡುತ್ತಾರೆ. ಸ್ವಲ್ಪ ತಾಳ್ಮೆಯಿಂದ ಇರುವಂತೆ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರು ಮಾಜಿ ಶಾಸಕ ಅಪ್ಪಾಜಿ ನಾಡಗೌಡರ ಹೆಸರು ಹೇಳದೇ ಅವರನ್ನು ಟೀಕಿಸಿದರು.
ಪಟ್ಟಣದ ತಮ್ಮ ನಿವಾಸದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ನಮ್ಮ ಪಕ್ಷದಿಂದ ಅಧಿಕೃತವಾಗಿ ಆಯ್ಕೆಯಾಗಿರುವ ಕಾಳಗಿ ತಾಂಡಾದ ಸದಸ್ಯೆ ಲಕ್ಷ್ಮಿಬಾಯಿ ರಾಠೋಡ ಜು.13 ರಂದೇ ಕಾಣಿಯಾಗಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಅವರನ್ನು ಯಾರು ಎಲ್ಲಿ ಇರಿಸಿದ್ದಾರೆ, ಯಾವ ಒತ್ತಡ ತಂದಿದ್ದಾರೆ ಎಂಬುದನ್ನು ತನಿಖೆ ನಡೆಸುವಂತೆ ಅಧಿಕಾರಿಗಳಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ ಸದಸ್ಯೆ ಗೂಳಿ ಅವರೇ ಸ್ವಯಂ ವಕೀಲರ ಮೂಲಕ ನೋಟರಿ ಮಾಡಿ, ತಮ್ಮ ಕುಟುಂಬ ಆದಾಯ ತೆರಿಗೆ ಪಾವತಿಸುತ್ತಿದೆ ಎಂದು ಅಧಿಕಾರಿಗಳಿಗೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ನಿಯಮಾವಳಿಗಳ ಪ್ರಕಾರ ಗೂಳಿ ಅವರಿಗೆ ಸ್ಪರ್ಧಿಸಲು ಅವಕಾಶವೇ ಇಲ್ಲ ಎಂಬುದು ತಿಳಿದು ಬರುತ್ತದೆ. ಆರೋಪ ಮಾಡುವ ಮುನ್ನ ದಾಖಲಾತಿಗಳನ್ನು ಇಟ್ಟುಕೊಂಡು ಮಾಜಿ ಶಾಸಕರು ಆರೋಪ ಮಾಡುವಂತೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಂಡಲ ಅಧ್ಯಕ್ಷ ಪರಶುರಾಮ ಪವಾರ, ತಾಪಂ ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ, ಸದಸ್ಯೆ ಲಕ್ಷ್ಮಿಬಾಯಿ ರಾಠೋಡ ಹವಾಲ್ದಾರ್, ಪಾರ್ವತಿ ಗುಡಿಮನಿ, ಕಸ್ತೂರಿಬಾಯಿ ಗುಳಬಾಳ, ಚಂದ್ರಕಲಾ ಲೊಟಗೇರಿ, ಶಿವನಗೌಡ ಮುದ್ದೇಬಿಹಾಳ ಮತ್ತಿತರರು ಇದ್ದರು.