ಮುದ್ದೇಬಿಹಾಳ: ಕಳೆದ ಎರಡು ತಿಂಗಳಿನಿಂದ ವೃದ್ಧಾಪ್ಯ ಮಾಸಾಶನ ಬಂದಿಲ್ಲವೆಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರ ಎದುರಿಗೆ ವೃದ್ಧೆಯೊಬ್ಬರು ಅಳಲು ತೋಡಿಕೊಂಡ ಘಟನೆ ತಾಲೂಕಿನ ಯರಝರಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿರುವ ಶಾಲೆಗೆ ಭೇಟಿ ನೀಡಿದ್ದ ವೇಳೆ ಯರಝರಿ ಗ್ರಾಮದ ಸಿದ್ಧವ್ವ ಹೊಸಮನಿ ಎಂಬ ವೃದ್ಧೆ ತನಗೆ ಎರಡು ತಿಂಗಳ ಮಾಸಾಶನ ಬರಬೇಕು ಎಂದು ಗೋಳು ತೋಡಿಕೊಂಡರು. ತಕ್ಷಣ ಶಾಸಕರು ವೃದ್ಧೆಯ ಕೈಯ್ಯಲ್ಲಿದ್ದ ಪಾಸ್ಬುಕ್ ಪರಿಶೀಲನೆ ನಡೆಸಿದರು. ಅಲ್ಲದೆ ಆಕೆಗೆ 1000 ರೂ. ವೈಯಕ್ತಿಕ ಧನಸಹಾಯವನ್ನು ಮಾಡಿದರು.
ಎರಡು ದಿನಗಳಲ್ಲಿ ಬಾಕಿ ಮಾಸಾಶನದ ಹಣವನ್ನು ಅಧಿಕಾರಿಗಳ ಮೂಲಕ ಖಾತೆಗೆ ಜಮಾ ಮಾಡಿಸುವುದಾಗಿ ತಿಳಿಸಿದರು. ಈ ವೇಳೆ ತಹಶೀಲ್ದಾರ್ ಜಿ.ಎಸ್. ಮಳಗಿ, ತಾಪಂ ಇಓ ಶಶಿಕಾಂತ ಶಿವಪುರೆ ಇತರರು ಇದ್ದರು.