ವಿಜಯಪುರ: ಆಪರೇಷನ್ ಕಮಲ ಮೂಲಕ ಬಿಜೆಪಿ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರ ವಹಿಸಿಕೊಂಡಾಗ ನಡೆದ ಸಚಿವ ಸ್ಥಾನದ ಲೆಕ್ಕಾಚಾರವೇ ತಪ್ಪಾಗಿ ಆರಂಭವಾಯಿತು. ಕೇವಲ ಬೆಂಗಳೂರು ಸುತ್ತಮುತ್ತಲೂ, ಹಿರಿಯ ಮುಖಂಡರು ಹಾಗೂ ಹೊರಗಡೆಯಿಂದ ಬಂದವರಿಗೆ ಸಚಿವ ಸ್ಥಾನ ನೀಡಿದ ಪರಿಣಾಮ ಉತ್ತರ ಕರ್ನಾಟಕದಲ್ಲಿ ಸಹಜವಾಗಿ ಅಸಮಾಧಾನದ ಹೊಗೆ ಆಡಲು ಆರಂಭವಾಗಿತ್ತು.
ವಿಜಯಪುರ ಜಿಲ್ಲೆಯಿಂದ ಮೂವರು ಬಿಜೆಪಿ ಪಕ್ಷದಿಂದ ಜಯಗಳಿಸಿದ್ದರು. ಇವರಲ್ಲಿ ಒಬ್ಬರಿಗೂ ಸಚಿವ ಸ್ಥಾನ ಹೋಗಲಿ ಯಾವುದೇ ಸ್ಥಾನ ಮಾನ ನೀಡದಿರುವುದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದೆಲ್ಲಾ ನೋಡಿಕೊಂಡೇ ಶಾಸಕ ಯತ್ನಾಳ್ ಸಿಎಂ ಬಿಎಸ್ ವೈ ವಿರುದ್ಧ ಪರೋಕ್ಷವಾಗಿ ಟೀಕೆ ಮಾಡಲು ಆರಂಭಿಸಿದ್ದರು. ಇದು ಸಹಜವಾಗಿ ಸಿಎಂ ಬಿಎಸ್‍ವೈ ನಿದ್ದೆಗೆಡಿಸಿತ್ತು. ಸಾಕಷ್ಟು ಬಾರಿ ಪರೋಕ್ಷವಾಗಿ ಪಕ್ಷದ ನಾಯಕರು ಯತ್ನಾಳ ಅವರಿಗೆ ಎಚ್ಚರಿಕೆ ನೀಡಿದ್ದರು. ಇವರ ಈ ನಡೆ ರಾಷ್ಟ್ರೀಯ ಬಿಜೆಪಿ ನಾಯಕರನ್ನು ಕೆರಳಿಸಿತ್ತು. ಆದರೂ ಸಹ ಯತ್ನಾಳ್ ಮಾತ್ರ ತಮ್ಮ ವಾಗ್ದಾಳಿ ಮುಂದುವರೆಸಿದ್ದರು.
ಅನಿವಾರ್ಯವಾಗಿ ಸಿಎಂ ಬಿಎಸ್‍ವೈ , ಸಚಿವ ಸೋಮಣ್ಣ ಮೂಲಕ ಸಂಧಾನ ನಡೆಸಿರುವುದು ಗೌಪ್ಯವಾಗೇನೂ ಉಳಿದಿಲ್ಲ. ಈ ನಡುವೆ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಸಹ ಸಚಿವ ಸ್ಥಾನ ಕಳೆದುಕೊಳ್ಳುವ ಆತಂಕದಲ್ಲಿ ಇರುವ ಕಾರಣ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಜತೆ ಇತ್ತೀಚೆಗೆ ವಿಜಯಪುರಕ್ಕೆ ಆಗಮಿಸಿದ್ದ ಅವರು ಮಾತುಕತೆ ಸಹ ನಡೆಸಿದ್ದರು. ಆಗಲೂ ಸಹ ಯತ್ನಾಳ ತಮಗೆ ಸಚಿವ ಸ್ಥಾನ ಬೇಕಾಗಿಲ್ಲ, ವಿಜಯಪುರ ನಗರಕ್ಕೆ ಹೆಚ್ಚಿನ ಅನುದಾನ ದೊರಕಿಸಿಕೊಡುವಂತೆ ಒತ್ತಾಯಿಸಿದ್ದರು. ಇದರ ಪರಿಣಾಮ ಸಚಿವೆ ಶಶಿಕಲಾ ಜೊಲ್ಲೆ ಖುದ್ದು ಸಿಎಂ ಬಿಎಸ್‍ವೈ ಅವರನ್ನು ಭೇಟಿ ಮಾಡಿ ಶಾಸಕರ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು ಎನ್ನಲಾಗಿದೆ. ಇದರ ಜತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡೆಸಿದ ಹೋರಾಟದ ಪ್ರತಿಫಲವಾಗಿ ಜಿಲ್ಲೆಗೆ ಹೆಚ್ಚಿನ ಅನುದಾನವನ್ನು ಸಿಎಂ ಮಂಜೂರು ಮಾಡಿದ್ದರು.
ಸದ್ಯ ಯತ್ನಾಳ ನ.25ರವರೆಗೆ ಬಿಜೆಪಿ ಸರ್ಕಾರಕ್ಕೆ ಗಡುವು ನೀಡಿದ್ದು, ಅದರಲ್ಲಿ ಸಿಎಂ ಬಿಎಸ್‍ವೈ ಶಾಸಕ ಯತ್ನಾಳರಿಗೆ ಸಚಿವ ಸ್ಥಾನದ ಜತೆ ವಿಜಯಪುರ ಜಿಲ್ಲಾ ಉಸ್ತುವಾರಿ ನೀಡದಿದ್ದರೇ ಮತ್ತೆ ಬಿಜೆಪಿ ಸರ್ಕಾರಕ್ಕೆ ಕಂಟಕ ಕಾಯ್ದಿದೆ ಎನ್ನುವುದು ಯತ್ನಾಳ್ ಬೆಂಬಲಿಗರ ಮಾತು.