ವಿಜಯಪುರ: 2ಎ ಮೀಸಲಾತಿ ಹೋರಾಟದ ವೇದಿಕೆಯಲ್ಲಿ ಹಿರಿಯ ಸ್ವಾಮೀಜಿಗಳ ಜತೆ ನಡೆದುಕೊಂಡಿರುವ ರೀತಿ ವಿರುದ್ಧ ತಿರುಗಿ ಬಿದ್ದಿರುವ ಪಂಚಮಸಾಲಿ ಪೀಠದ 30ಕ್ಕೂ ಹೆಚ್ಚು ಸ್ವಾಮೀಜಿಗಳು ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದ ಹಿರೇಮಠ ಮಠದಲ್ಲಿ ಸಭೆ ಸೇರಿ ಚರ್ಚೆ ನಡೆಸಿದರು.
ಸಿಎಂ ಬಿ.ಎಸ್. ಯಡಿಯೂರಪ್ಪ ಪರ ಕೆಲ ಸ್ವಾಮೀಜಿಗಳು ಮಾಧ್ಯಮದ ಎದುರು ಧ್ವನಿ ಎತ್ತಿದರೆ, ಇನ್ನೂ ಕೆಲ ಸ್ವಾಮೀಜಿಗಳು ತಟಸ್ಥ ನಿಲುವು ತಾಳುವ ಮೂಲಕ ತಮ್ಮ ಸಮಾಜವನ್ನು ಕಟ್ಟಿ ಬೆಳೆಸಿದ ಮೇಲೆ ರಾಜಕೀಯ ಸಬಲರಾಗುವ ಸಂದೇಶ ಸಾರಿದರು.
ಹಿರೇಮಠದಲ್ಲಿ ನಡೆದ ಸಭೆಯಲ್ಲಿ ರಾಜ್ಯದ ಪಂಚಮಸಾಲಿ ಸಮಾಜದ 30ಕ್ಕೂ ಹೆಚ್ಚು ಮಠಾಧೀಶರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಈ ವೇಳೆ ಮಾತನಾಡಿದ ನಿಲೋಗಿ ಗ್ರಾಮದ ಸಿದ್ದಲಿಂಗಸ್ವಾಮೀಜಿ, ಸಿಎಂ ಬದಲಾವಣೆ ಮಠಾಧೀಶರ ಕೆಲಸವಲ್ಲ, ಅದು ಆ ಪಕ್ಷದ ಹೈಕಮಾಂಡ್‌ಗೆ ಬಿಟ್ಟಿದ್ದು, ಇದನ್ನು ಸ್ವತಃ ಅವರೇ ಹೇಳಿದ್ದಾರೆ. ರಾಜಕೀಯ ವಿಚಾರದಲ್ಲಿ ಸ್ವಾಮೀಜಿಗಳು ಹಸ್ತಕ್ಷೇಪ ಮಾಡುವದು ಸರಿಯಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳುತ್ತಿರುವುದು ಸತ್ಯ ಎಂದರು.
ಇದೇ ವೇಳೆ ಸಭೆಗೆ ಕೂಡಲಸಂಗಮ ಶ್ರೀಗಳ ಗೈರು ಬಗ್ಗೆ ಪ್ರಸ್ತಾಪಿಸಿದ ಶ್ರೀಗಳು ಬರುವುದು, ಬಿಡುವದು ಅವರಿಗೆ ಬಿಟ್ಟಿದ್ದು. ಆದರೆ ಅವರು ಮೀಸಲಾತಿ ಹೋರಾಟ ವಿಚಾರದಲ್ಲಿ ಹಿರಿಯ ಶ್ರೀಗಳಿಗೆ ಅಗೌರವ ತೋರಿದ್ದಾರೆ ಅದರ ಬಗ್ಗೆ ಆಕ್ಷೇಪವಿದೆ ಎಂದರು.
ಇದನ್ನೂ ಓದಿ: ಅನ್ಲಾಕ್ 3 ಜಾರಿ: ಕರುನಾಡು ಸಂಪೂರ್ಣ ಓಪನ್; ಸಹಜ ಸ್ಥಿತಿಯತ್ತ ಬೆಂಗಳೂರು
ಇದೇ ವೇಳೆ ಲಿಂಗಾಯತ ಶಾಸಕರ ಪರ ಬೆಂಬಲ ಸೂಚಿಸಿದ ಮನಗೂಳಿ ಹಿರೇಮಠದ ಸ್ವಾಮೀಜಿ ಸಂಗನಬಸವ ಸ್ವಾಮೀಜಿ, ನಿರಾಣಿಯಾಗಲಿ, ಬಸನಗೌಡ ಪಾಟೀಲ ಯತ್ನಾಳ ಹಾಗೂ ಬೆಲ್ಲದ ಆಗಲಿ ಯಾವುದೇ ಆಕ್ಷೇಪವಿಲ್ಲ ಎನ್ನುವುದರ ಜತೆಗೆ ಬಿ.ಎಸ್.ಯಡಿಯೂರಪ್ಪ 5 ವರ್ಷ ಪೂರ್ಣಗೊಳಿಸುವ ಇಂಗಿತ ಸಹ ವ್ಯಕ್ತಪಡಿಸಿದರು.
ಒಟ್ಟಾರೆ ಪಂಚಮಸಾಲಿ ಮಠಾಧೀಶರ ಒಕ್ಕೂಟದ ಮೂರನೇ ಸಭೆಯಲ್ಲಿ ಸಮಾಜ ಬಲಪಡಿಸುವ ಉದ್ದೇಶಕ್ಕಾಗಿ ಎನ್ನುವುದರ ಜತೆ ಲಿಂಗಾಯತ ಶಾಸಕರ ಪರ ಚರ್ಚೆ, ಕೂಡಲಸಂಗಮ ಶ್ರೀಗಳ ನಡೆಯನ್ನು ಖಂಡಿಸುವ ಕೆಲಸ ನಡೆಯಿತು.