ವಿಜಯಪುರ: ಜಿಲ್ಲೆಯಲ್ಲಿ ಮೂವರು ಹಾಲಿ ಹಾಗೂ ಓರ್ವ ಮಾಜಿ ಶಾಸಕರಿಗೆ ಟಿಕೆಟ್ ಫೈನಲ್ ಮಾಡಲಾಗಿದೆ. ಉಳಿದ ನಾಲ್ಕು ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಈ ಕ್ಷೇತ್ರಗಳ ಟಿಕೆಟ್ ಹಂಚಿಕೆ ಸ್ಕ್ರೀನಿಂಗ್ ಕಮಿಟಿ ವರದಿಯ ಆಧಾರದಲ್ಲಿ ನಡೆಯಲಿದೆ ಎಂದು ತಿಕೋಟಾದಲ್ಲಿ ಶನಿವಾರ ನಡೆದ ರೈತ ಸಮಾವೇಶ ಮುಗಿದ ನಂತರ ಎಂ.ಬಿ.ಪಾಟೀಲ್ ಸುದ್ದಿಗಾರರಿಗೆ ತಿಳಿಸಿದರು. ಇದೇ ವೇಳೆ, ಎರಡಕ್ಕಿಂತ ಹೆಚ್ಚು ಹೆಸರಿರುವ ಕ್ಷೇತ್ರಗಳಲ್ಲಿ ಸರ್ವೆ ರಿಪೋರ್ಟ್, ಸಾಮಾಜಿಕ ನ್ಯಾಯ ಆಧರಿಸಿ ಟಿಕೆಟ್ ನೀಡಲಾಗುತ್ತದೆ. ಜಟಿಲ ಕ್ಷೇತ್ರಗಳು ಸಿಇಸಿಗೆ (ಕೇಂದ್ರ ಚುನಾವಣಾ ಸಮಿತಿ) ಹೋಗಿ ಫೈನಲ್ ಆಗುತ್ತವೆ ಎಂದರು.
ಮೊದಲು ಪಟ್ಟಿಯಲ್ಲಿ ಬಬಲೇಶ್ವರ- ಎಂ.ಬಿ.ಪಾಟೀಲ್, ಬಸವನಬಾಗೇವಾಡಿ- ಶಿವಾನಂದ ಪಾಟೀಲ, ಇಂಡಿ- ಯಶವಂತ ರಾಯಗೌಡ ಪಾಟೀಲ ಹಾಗೂ ಮುದ್ದೇಬಿಹಾಳ ಕ್ಷೇತ್ರದಿಂದ ಮಾಜಿ ಶಾಸಕ ಅಪ್ಪಾಜಿ ನಾಡಗೌಡ ಅವರಿಗೆ ಟಿಕೆಟ್ ಫೈನಲ್ ಮಾಡಲಾಗಿದೆ. ಉಳಿದಂತೆ ದೇವರಹಿಪ್ಪರಗಿಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಎಸ್.ಆರ್.ಪಾಟೀಲ ಹಾಗೂ ಡಾ.ಪ್ರಭುಗೌಡ ಪಾಟೀಲ ಲಿಂಗದಳ್ಳಿ ಸೇರಿ 10 ಜನ ಟಿಕೆಟ್ ಆಕಾಂಕ್ಷಿಗಳಿದ್ದಾರೆ.
ಯತ್ನಾಳ್ ವಿರುದ್ಧ ಪ್ರಬಲ ಅಭ್ಯರ್ಥಿಗೆ ಶೋಧ: ಸಿಂದಗಿ ಕ್ಷೇತ್ರದಲ್ಲಿ ಉಪ ಚುನಾವಣೆಯಲ್ಲಿ ಸೋಲು ಅನುಭವಿಸಿರುವ ಅಶೋಕ ಮನಗೂಳಿ, ಶರಣಪ್ಪ ಸುಣಗಾರ ಟಿಕೆಟ್ ಆಕಾಂಕ್ಷಿಯಾಗಿದ್ದರೂ ಹೊಸ ಅಭ್ಯರ್ಥಿಗೆ ಮಣೆ ಹಾಕಿದರೆ ಅಚ್ಚರಿಪಡಬೇಕಿಲ್ಲ. ನಾಗಠಾಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಬಲ ಅಭ್ಯರ್ಥಿ ಇಲ್ಲದಿದ್ದರೂ ಲಮಾಣಿ ಸಮುದಾಯಕ್ಕೆ ಸೇರಿದ ಪ್ರಕಾಶ ರಾಥೋಡ್ ಹೆಸರು ಕೇಳಿಬರುತ್ತಿದೆ. ವಿಜಯಪುರ ನಗರ ಕ್ಷೇತ್ರದಲ್ಲಿ ಬಿಜೆಪಿ ಹಾಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಎದುರು ಪ್ರಬಲ ಅಭ್ಯರ್ಥಿ ಹುಡುಕಾಟ ನಡೆಯುತ್ತಿದೆ.
ಕಳೆದ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಸೋತ ಹಮೀದ್ ಮುಶ್ರಿಫ್ ಹಾಗೂ 2013ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಮಕಬುಲ್ ಬಾಗವಾನ ನಡುವೆ ಫೈಪೋಟಿ ಇದೆ. ವಿಜಯಪುರ ನಗರ ಕ್ಷೇತ್ರಕ್ಕೆ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡುವುದಾಗಿ ಈ ಹಿಂದೆ ಎಂ.ಬಿ.ಪಾಟೀಲ ಸ್ಪಷ್ಟಪಡಿಸಿದ್ದು, ಇಬ್ಬರಲ್ಲಿ ಒಬ್ಬರು ಕಣಕ್ಕೆ ಇಳಿಯುವುದು ಬಹುತೇಕ ಖಚಿತ. ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ಮೇಲೆ ಕಾಂಗ್ರೆಸ್ ತನ್ನ ದಾಳ ಉರುಳಿಸಲಿದೆ.
ಇದನ್ನೂ ಓದಿ: ದಾವಣಗೆರೆಯಲ್ಲಿ ಪ್ರಧಾನಿ ಮೋದಿ ರೋಡ್ ಶೋ ವೇಳೆ ಭದ್ರತಾ ಲೋಪ