ವಿಜಯಪುರ: ಡಿ.ಕೆ.ಶಿವಕುಮಾರ್ ವಿರುದ್ಧದ ಸಿಬಿಐ ಪ್ರಕರಣವನ್ನು ಕ್ಯಾಬಿನೆಟ್‌ನಲ್ಲಿ ವಾಪಸ್ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವ ಎಂ.ಬಿ.ಪಾಟೀಲ್, ಸಚಿವ ಸಂಪುಟದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಬಿಜೆಪಿಗರ ಆರೋಪಕ್ಕೆ ತಿರುಗೇಟು ನೀಡಿದ ಅವರು, "ಬಿಜೆಪಿಯವರು ಕಳೆದ ಒಂಭತ್ತು ವರ್ಷಗಳಿಂದ ಸಿಬಿಐ, ಇಡಿ ಸಂಸ್ಥೆಗಳನ್ನು ಉಪಯೋಗಿಸಿಕೊಂಡು ರಾಜಕಾರಣ ಮಾಡುತ್ತಿದ್ದಾರೆ" ಎಂದು ಆರೋಪಿಸಿದರು.
ಜಿಲ್ಲೆಯಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ಸಿಬಿಐ, ಇಡಿ ಬಳಸಿಕೊಂಡು ವಿರೋಧಿಗಳ ಹತ್ತಿಕ್ಕುವ ಪ್ರಥಮ ಅಜೆಂಡಾ ಬಿಜೆಪಿಯವರದ್ದು. ಸೋನಿಯಾ, ರಾಹುಲ್ ಗಾಂಧಿಯವರನ್ನು ಕೂಡ ಬಿಟ್ಟಿಲ್ಲ. ಪಶ್ಚಿಮ ಬಂಗಾಳ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಸಿಬಿಐ, ಐಟಿ, ಇಡಿ ಏಜೆನ್ಸಿಗಳು ಬಿಜೆಪಿ ಅಂಗಸಂಸ್ಥೆಗಳಾಗಿವೆ. ಬಿಜೆಪಿ ಅಂಗಸಂಸ್ಥೆಗಳ ತರಹ ಅವುಗಳನ್ನು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಉಪಯೋಗಿಸಿ ಕೊಳ್ಳುತ್ತಿದ್ದಾರೆ" ಎಂದರು.
ಡಿ.ಕೆ.ಶಿವಕುಮಾರ್ ವಿರುದ್ಧದ ಸಿಬಿಐ ಕೇಸ್ ವಾಪಸ್ ವಿಚಾರವಾಗಿ ನ್ಯಾಯಾಲಯಕ್ಕೆ ಹೋಗುತ್ತೇವೆ ಎಂಬ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿ, "ಕೋರ್ಟ್ಗೆ ಹೋಗುತ್ತೇವೆ ಎನ್ನುವ ಯಾರನ್ನಾದರೂ ತಡೆಯಲು ಆಗುತ್ತಾ?. ಅದು ಸಂವಿಧಾನಬದ್ಧ ಹಕ್ಕು. ಕೋರ್ಟ್ಗೆ ಹೋಗಲು ನಿಮಗ್ಯಾರೂ ಬೇಡ ಅನ್ನುತ್ತಾರೆ" ಎಂದು ಯತ್ನಾಳ್ ಕಾಲೆಳೆದರು.
ಜಾತಿ ಗಣತಿ ಮೂಲ ಪ್ರತಿ ನಾಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಎಂ.ಬಿ.ಪಾಟೀಲ್, "2021ರಲ್ಲಿ ಜಾತಿ ಗಣತಿ ವರದಿ ನಾಪತ್ತೆಯಾಗಿದೆ ಎಂದು ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ. 2021ರಲ್ಲಿ ಯಾರು ಅಧಿಕಾರದಲ್ಲಿದ್ದರು?. ಬಿಜೆಪಿ ಅಧಿಕಾರದಲ್ಲಿದ್ದಾಗ ನಾಪತ್ತೆಯಾಗಿದ್ದರೆ ಕಾಂಗ್ರೆಸ್ನವರು ಹೇಗೆ ಕಾರಣರಾಗ್ತಾರೆ?. ಎಲ್ಲದಕ್ಕೂ ಕಾಂಗ್ರೆಸ್ ಕಾರಣವೇ?. ಈ ಬಗ್ಗೆ ನಾವು ಸೂಕ್ತ ನಿರ್ಣಯ ತೆಗೆದುಕೊಳ್ಳುತ್ತೇವೆ. ಅದರ ಸತ್ಯಾಸತ್ಯತೆ ತಿಳಿದುಕೊಂಡು ಮಾತನಾಡಬೇಕಾಗುತ್ತೆ. ನನಗೆ ಜಯಪ್ರಕಾಶ್ ಹೆಗ್ಡೆ ಅವರ ಪತ್ರದ ಬಗ್ಗೆ ಗೊತ್ತಿಲ್ಲ. ಮಾಧ್ಯಮದವರು ಹೇಳಿದ್ಮೇಲೆ ಮಾತನಾಡ್ತಿದ್ದೇನೆ" ಎಂದು ಬಿಜೆಪಿ ನಾಯಕರ ಆರೋಪಕ್ಕೆ ಕೌಂಟರ್ ಕೊಟ್ಟರು.
ನನ್ನ ಪ್ರಶ್ನೆಗಳಿಗೆ ಉತ್ತರಿಸದೇ ಸರ್ಕಾರ ನಿರುತ್ತರವಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಕ್ಸಮರ ನಡೆಸಿದ ವಿಚಾರಕ್ಕೆ, "ಪಾಪ ಕುಮಾರಸ್ವಾಮಿ ಅವರ ಪರಿಸ್ಥಿತಿ ನನಗೆ ಅರ್ಥವಾಗುತ್ತೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಆಗುತ್ತೆ, ನಮ್ಮನ್ನು ಬಿಟ್ಟು ಯಾರೂ ಅಧಿಕಾರ ಹಿಡಿಯಲು ಆಗಲ್ಲ ಅಂತ ಬಹಳ ಅಪೇಕ್ಷೆಪಟ್ಟಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಜನ ಸಂಪೂರ್ಣ ಅಧಿಕಾರ ಕೊಟ್ಟರು. ಹೀಗಾಗಿ, ಸ್ವಾಭಾವಿಕವಾಗಿ ಹೆಚ್.ಡಿ.ಕುಮಾರಸ್ವಾಮಿಯವರಿಗೆ ದುಃಖವಾಗಿದೆ. ಈಗ ನೋವನ್ನು ಹೊರತೆಗೆಯುತ್ತಿದ್ದಾರೆ" ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ಡಿಕೆಶಿ ವಿರುದ್ಧ ಸಿಬಿಐ ತನಿಖೆ : ಸಿದ್ದರಾಮಯ್ಯ ತಿರುಚುವ ಕೆಲಸ ಮಾಡಿದ್ದಾರೆ.. ಮಾಜಿ ಸಿಎಂ ಯಡಿಯೂರಪ್ಪ ಕಿಡಿ
"ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟು ಯಡಿಯೂರಪ್ಪನವರನ್ನು ಉಪಯೋಗಿಸಲು ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಇದು ಯಡಿಯೂರಪ್ಪನವರ ಮೇಲಿನ ಪ್ರೀತಿಯಿಂದಲ್ಲ. ವಿಜಯೇಂದ್ರರನ್ನು ಅಧ್ಯಕ್ಷನನ್ನಾಗಿ ಮಾಡಿದರೆ ಯಡಿಯೂರಪ್ಪನವರು ಎಂಪಿ ಚುನಾವಣೆಯಲ್ಲಿ ಎಲ್ಲೆಡೆ ಓಡಾಡುತ್ತಾರೆ, ಪ್ರಚಾರ ಮಾಡುತ್ತಾರೆ, ನಮಗೆ ಲಾಭ ಆಗುತ್ತದೆ ಎಂದುಕೊಂಡಿದ್ದಾರೆ. ಈ ಕುರಿತು ಅವರದ್ದೇ ಪಕ್ಷದ ಪ್ರಹ್ಲಾದ ಜೋಶಿ ಈಗಾಗಲೇ ಹೇಳಿಕೆ ನೀಡಿದ್ದಾರೆ. 3 ವರ್ಷಕ್ಕೆ ಮಾತ್ರ ಇವರು ರಾಜ್ಯದ ಅಧ್ಯಕ್ಷರು ಎಂದು. ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಯಥಾಸ್ಥಿತಿ ಮುಂದುವರೆಯುತ್ತದೆ" ಎಂದರು.