ವಿಜಯಪುರ: ಸಿಎಂ ಬಿಎಸ್ವೈ ಆಡಿಯೋ ಬಹಿರಂಗ ಮಾತುಕತೆ ವಿಚಾರವಾಗಿ ಜಿಲ್ಲೆಯ ಅರಕೇರಿಯಲ್ಲಿ ಮಾಜಿ ಸಚಿವ ಎಂ. ಬಿ. ಪಾಟೀಲ ಪ್ರತಿಕ್ರಿಯೆ ನೀಡಿದರು.
ಆಡಿಯೋ ಬಿಡುಗಡೆಗೂ ಮುನ್ನವೇ ಈ ವಿಚಾರ ಇಡೀ ಜಗತ್ತಿಗೆ ಗೊತ್ತಿತ್ತು. ಇದನ್ನು ಯಡಿಯೂರಪ್ಪ, ಅಮಿತ್ ಶಾ ಅವರೇ ಮಾಡಿದ್ದು ಎನ್ನುವುದು ಓಪನ್ ಸೀಕ್ರೆಟ್ ಆಗಿತ್ತು. ಈವರೆಗೆ ಆತ್ಮವಂಚನೆ ಮಾಡಿಕೊಳ್ಳುತ್ತಿದ್ದ ಯಡಿಯೂರಪ್ಪ ಸತ್ಯವನ್ನು ಹೇಳಿದ್ದಾರೆ. ನಿನ್ನೆ ಹೈಕಮಾಂಡ್ ನಿಂದ ಬೆದರಿಕೆ ಬಂದಿರಬೇಕು ಈ ಹಿನ್ನೆಲೆ ಯಡಿಯೂರಪ್ಪ ಈಗ ಉಲ್ಟಾ ಹೊಡೆದಿದ್ದಾರೆ ಎಂದು ವ್ಯಂಗ್ಯವಾಡಿದರು.
ಅಮಿತ್ ಶಾ ಎರಡೂವರೆ ತಿಂಗಳು ಮುಂಬೈನಲ್ಲಿ ಅನರ್ಹ ಶಾಸಕರಿಗೆ ರಕ್ಷಣೆ ನೀಡಿದ್ದರು ಎಂಬುದು ಬಹಿರಂಗವಾಗಿದೆ. ಈವರೆಗೆ ಇದೆಲ್ಲ ಅನಧಿಕೃತವಾಗಿತ್ತು ಈಗ ಯಡಿಯೂರಪ್ಪ ಅದನ್ನು ಅಧಿಕೃತ ಮಾಡಿದ್ದಾರೆ ಎಂದರು.
ಈ ಆಡಿಯೋ ಸಿದ್ಧರಾಮಯ್ಯ ಮಾಡಿಸಿದ್ದಾರೆ ಎಂಬುದು ಚಿಲ್ಲರೆ ಆರೋಪ. ಅಲ್ಲಿ ಬಿಜೆಪಿ ಸಭೆ ನಡೆದಿತ್ತು ಅಲ್ಲಿನ ಸ್ಥಳೀಯ ಕಾರ್ಯಕರ್ತರು, ಮೂಲ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಇಲ್ಲಿ ಇದನ್ನು ಮಾಡಿದ್ದಾರೆ ಎಂದು ಎಂ. ಬಿ. ಪಾಟೀಲ ವಾಗ್ದಾಳಿ ನಡೆಸಿದರು.