ವಿಜಯಪುರ: ಬೇಗಂ ತಲಾಬ್ ಕೆರೆ ಪರಿಸರದಲ್ಲಿ ವಾಯು ವಿಹಾರಕ್ಕೆ ತೆರಳಿದ ಮಾಜಿ ಸಚಿವ ಎಂ.ಬಿ.ಪಾಟೀಲ್, ಕೆರೆಯ ಆವರಣದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಿದರು.
![MB Patiala seen the development Begum Talab Lake](https://etvbharatimages.akamaized.net/etvbharat/prod-images/kn-vjp-02-mbpatil-vist-av-7202140_23052020143106_2305f_1590224466_903.jpg)
ಆದಿಲ್ ಶಾಹಿ ಅರಸರು ನಿರ್ಮಿಸಿದ 240 ಎಕರೆ ವಿಸ್ತೀರ್ಣದ ಬೇಗಂ ತಲಾಬ್ ಕೆರೆಗೆ ಎಂ.ಬಿ.ಪಾಟೀಲ್ ಸಚಿವರಾಗಿದ್ದಾಗ ಹೂಳು ತೆಗೆಯಿಸಿ ಕೃಷ್ಣಾ ನದಿಯಿಂದ ಪೈಪ್‍ಲೈನ್ ಮೂಲಕ ಪ್ರತಿ ವರ್ಷವೂ ನೀರು ತುಂಬಿಸುವ ಯೋಜನೆ ಕಾರ್ಯಗತಗೊಳಿಸಿದ್ದರು. ಅಲ್ಲದೇ ಕೆರೆಯ ಪರಿಸರದಲ್ಲಿ ಬೃಂದಾವನ ಮಾದರಿಯಲ್ಲಿ ಉದ್ಯಾನವನ, ಯೋಗಾ ಹಾಲ್, ಬಯಲು ರಂಗಮಂದಿರ, ಫುಡ್ ಕೋರ್ಟ್, ಸ್ತ್ರೀ-ಪುರುಷ ಪ್ರತ್ಯೇಕ ಶೌಚಾಲಯಗಳು, ಕಾರಂಜಿ, ಓಪನ್ ಜಿಮ್ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು 11.26 ಕೋಟಿ ಅನುದಾನ ಒದಗಿಸಿ ಕಾಮಗಾರಿ ಆರಂಭಿಸಿದ್ದರು.
ಮುಂದಿನ ಎರಡು ತಿಂಗಳಲ್ಲಿ ಕಾಮಗಾರಿ ಸಂಪೂರ್ಣಗೊಂಡು ನಾಗರಿಕರ ಸೇವೆಗೆ ಲಭ್ಯವಾಗಲಿದೆ. ವಾಯು ವಿಹಾರಿಗಳ ನಡಿಗೆಗೆ ಪ್ರತ್ಯೇಕ ಟ್ರ್ಯಾಕ್ ಮಾಡಲಾಗುತ್ತಿದ್ದು, ಅದು ಕೇವಲ 500 ಮೀಟರ್ ಇದೆ. ಅದನ್ನು ಒಂದು ಕಿ.ಮೀ.ವರೆಗೆ ವಿಸ್ತರಿಸಿಲು ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗಳಿಗೆ ಇನ್ನೂ ಅನುದಾನದ ಅಗತ್ಯ ಇದೆ. ಈ ಕುರಿತು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಜಿಲ್ಲಾಧಿಕಾರಿಗಳಿಗೆ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ವಿವರಿಸಿ, ಅದನ್ನು ಪಡೆಯಲು ಪ್ರಯತ್ನಿಸಲಾಗುವುದು ಎಂದರು.
ಬೇಗಂ ತಲಾಬ್ ಕೆರೆ ಆವರಣದ ಅಭಿವೃದ್ಧಿ ಕಾರ್ಯಗಳ ವಾಸ್ತುಶಿಲ್ಪಿ ಪಾರ್ಥ ಕೆಂಭಾವಿ, ವಿಡಿಎ ಮಾಜಿ ಅಧ್ಯಕ್ಷ ಚಂದ್ರಕಾಂತ ಶೆಟ್ಟಿ, ವೃಕ್ಷ ಅಭಿಯಾನ ಸಂಚಾಲಕ ಮುರುಗೇಶ ಪಟ್ಟಣಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.