ವಿಜಯಪುರ: ಕೊರೊನಾ ಸೋಂಕು ಸಮುದಾಯ ಹಬ್ಬುವಿಕೆ ಹಂತ ತಲುಪುತ್ತಿದ್ದರೂ ಜನತೆ ನಿರ್ಭೀತಿಯಿಂದ ಓಡಾಡುತ್ತಿರುವುದು ಆತಂಕಕಾರಿ ಸಂಗತಿ ಎಂದು ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ್ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಆರಂಭದಲ್ಲಿ ಜನರು ಕೊರೊನಾ ಭೀತಿ ಹಿನ್ನೆಲೆಯಲ್ಲಿ ಜಾಗರೂಕತೆಯಿಂದ ಇದ್ದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ಮಾಸ್ಕ್ ಧರಿಸುತ್ತಿದ್ದರು. ಆದರೆ ಇತ್ತೀಚೆಗೆ ಸಾಮಾಜಿಕ ಅಂತರ ಮಾಯವಾಗಿದೆ. ಮಾಸ್ಕ್ಗಳನ್ನು ಸರಿಯಾಗಿ ಧರಿಸುತ್ತಿಲ್ಲ. ಆದರೆ ಹಿಂದಿಗಿಂತಲೂ ಅತೀ ಹೆಚ್ಚಿನ ಪ್ರಮಾಣದಲ್ಲಿ ಕೊರೊನಾ ಹಬ್ಬುತ್ತಿರುವ ಕಾರಣ ಜನರು ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಈಗಾಗಲೇ ಕೊರೊನಾ ಎದುರಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಲ್ಲಾ ಅಗತ್ಯ ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಂಡಿವೆ. ಮಾಧ್ಯಮಗಳು ಈ ಕುರಿತು ಸಾಕಷ್ಟು ಜಾಗೃತಿ ಮೂಡಿಸಿವೆ. ಒಂದು ಹಂತದಲ್ಲಿ ನಾವು ಕೊರೊನಾ ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದೇವೆ ಎನ್ನುವ ಮುಂಚೆಯೇ ಮಹಾರಾಷ್ಟ್ರ ಹಾಗೂ ದೆಹಲಿಗಳಲ್ಲಿ ಆಘಾತಕಾರಿ ಹಂತ ತಲುಪಿದೆ. ನಮ್ಮ ರಾಜ್ಯದಲ್ಲಿ ಕೂಡ ಆ ರಾಜ್ಯಗಳ ಪರಿಸ್ಥಿತಿ ಆಗುವ ಮೊದಲೇ ಕಟ್ಟುನಿಟ್ಟಿನ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಳ್ಳಬೇಕು ಎಂದರು.
ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆ ಜಯದೇವ ಹೃದ್ರೋಗ ಸಂಸ್ಥೆಯನ್ನೇ ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದರೆ ಪರಿಸ್ಥಿತಿಯ ಗಂಭೀರತೆಯನ್ನು ಎಲ್ಲರೂ ಅರಿತುಕೊಳ್ಳಬೇಕು. ಈಗಾಗಲೇ ಆಸ್ಪತ್ರೆಗಳ ಹಾಗೂ ಹಾಸಿಗೆಗಳ ಕೊರತೆ ಉಂಟಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸಾ ವೆಚ್ಚ ಜನಸಾಮಾನ್ಯರಿಗೆ ಭರಿಸಲು ಸಾಧ್ಯವಿಲ್ಲ. ಇದೆಲ್ಲವನ್ನು ಸಾರ್ವಜನಿಕರು ಗಂಭೀರವಾಗಿ ಪರಿಗಣಿಸಬೇಕು.
ರೋಗದ ಕುರಿತು ಇದೀಗ ಭಯ ಮಾಯವಾಗಿ ಸಂತೆ, ಮಾರುಕಟ್ಟೆ, ನಿಶ್ಚಿತಾರ್ಥ, ಮದುವೆ, ಶವ ಸಂಸ್ಕಾರಗಳು ಸೇರಿದಂತೆ ಎಲ್ಲೆಡೆ ಸಾಮಾಜಿಕ ಅಂತರ ಕಾಪಾಡುತ್ತಿಲ್ಲ. ಇದರಿಂದ ಕೆಟ್ಟ ಪರಿಣಾಮ ಆಗುವ ಮುನ್ನವೇ ಪ್ರತಿಯೊಬ್ಬರೂ ತಮ್ಮ ಹಾಗೂ ತಮ್ಮ ಕುಟುಂಬದ ಸದಸ್ಯರ ವಿಶೇಷವಾಗಿ ಹಿರಿಯರ ಮತ್ತು ಮಕ್ಕಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸ್ವಯಂ ಪ್ರೇರಿತರಾಗಿ ಕ್ರಮ ವಹಿಸಬೇಕು ಎಂದು ಸಾರ್ವಜನಿಕರಲ್ಲಿ ಅವರು ಮನವಿ ಮಾಡಿದ್ದಾರೆ.