ವಿಜಯಪುರ: ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ತಾರಕಕ್ಕೇರಿದೆ. ಮಹಾರಾಷ್ಟ್ರದ ಗಡಿ ಕನ್ನಡಿಗರು ತಮ್ಮನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳಿ ಎಂದು ತಮ್ಮ ಗ್ರಾಮ ಪಂಚಾಯಿತಿಯಲ್ಲಿ ಠರಾವು ಪಾಸ್ ಮಾಡಿ ಮಹಾರಾಷ್ಟ್ರ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದ್ದರು. ಈ ಬೆನ್ನಲ್ಲೇ ಕರ್ನಾಟಕ ಸೇರಬಯಸುವ ಗ್ರಾಮ ಪಂಚಾಯಿತಿಗಳನ್ನು ವಿಸರ್ಜನೆ ಮಾಡುವುದಾಗಿ ಮಹಾರಾಷ್ಟ್ರ ಸರ್ಕಾರ ಎಚ್ಚರಿಕೆ ನೀಡಿದೆ.
2002ರಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ 22 ಗ್ರಾಮಗಳ ಜನರು ಮಹಾರಾಷ್ಟ್ರಕ್ಕೆ ಸೇರಲು ನಿರ್ಧಾರ ಮಾಡಿದ್ದರು. ಅಗತ್ಯ ಮೂಲಸೌಕರ್ಯ ನೀಡಿ, ಇಲ್ಲವೇ ಮಹಾರಾಷ್ಟ್ರಕ್ಕೆ ಸೇರುತ್ತೇವೆಂದು ತೀರ್ಮಾನ ಮಾಡಿದ್ದರು. ಬಳಿಕ ನಡೆದ ವಿದ್ಯಮಾನದಲ್ಲಿ ಆಗಿನ ಕರ್ನಾಟಕ ಸಿಎಂ ಎಸ್ ಎಂ ಕೃಷ್ಣ ಅವರು 204 ಕೋಟಿ ರೂಪಾಯಿಯನ್ನು ಆ ಭಾಗಕ್ಕೆ ಅನುದಾನವಾಗಿ ನೀಡಿದ್ದರು.
ಇದೇ ಮಾದರಿಯಲ್ಲೇ ಮಹಾರಾಷ್ಟ್ರ ಸರ್ಕಾರ ನಮಗೆ ಅನುದಾನ ನೀಡುವುದರ ಜೊತೆಗೆ ಎಲ್ಲಾ ಮೂಲಸೌಕರ್ಯ ನೀಡಬೇಕು ಎಂದು ಅಕ್ಕಲಕೋಟ ಜನರು ಒತ್ತಾಯಿಸಿದ್ದಾರೆ. ಅನುದಾನ ಹಾಗೂ ಇತರೆ ಸೌಕರ್ಯ ನೀಡಿ ಇಲ್ಲವೇ ಕರ್ನಾಟಕಕ್ಕೆ ಸೇರಲು ಅನುಮತಿ ನೀಡಿ ಎಂದು ಸೊಲ್ಲಾಪುರ ಜಿಲ್ಲೆ ಅಕ್ಕಲಕೋಟ ತಾಲೂಕಿನ ವಿವಿಧ ಗ್ರಾಮಗಳ ಜನರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಸೇರಲು ಮತದಾನ ಬಹಿಷ್ಕರಿಸಿದ ಮಹಾರಾಷ್ಟ್ರದ ಗಡಿ ಗ್ರಾಮ