ಮುದ್ದೇಬಿಹಾಳ (ವಿಜಯಪುರ): ಡಿವೈಎಸ್ಪಿ ಶಾಂತವೀರ ಈ. ಹಾಗೂ ಪಿಎಸ್ವೈ ಮಲ್ಲಪ್ಪ ಮಡ್ಡಿ ಮುದ್ದೇಬಿಹಾಳ ಪಟ್ಟಣದ ಎಪಿಎಂಸಿಯ ವಿವಾದಿತ ಜಾಗದ ಸ್ಥಳ ಪರಿಶೀಲನೆ ನಡೆಸಿದರು.
ಮುದ್ದೇಬಿಹಾಳ ಪಟ್ಟಣದ ಏಪಿಎಂಸಿಗೆ ವಾಲೀಕಾರ ಕುಟುಂಬದಿಂದ ಪರಭಾರೆಯಾಗಿದೆ ಎನ್ನಲಾದ ವಿವಾದಿತ ಜಮೀನಿನ ಕುರಿತು ಅರ್ಜಿದಾರ ಲಕ್ಷ್ಮಣ ವಾಲೀಕಾರ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿಯಾಗಿ ದೂರು ದಾಖಲಿಸಿದ್ದರು. ಈ ಹಿನ್ನೆಲೆ ಶುಕ್ರವಾರ ಡಿವೈಎಸ್‌ಪಿ ಶಾಂತವೀರ ವಿವಾದಿತ ಜಾಗಯನ್ನು ಪರಿಶೀಲನೆ ನಡೆಸಿದರು.
ಪಟ್ಟಣದ ಏಪಿಎಂಸಿಗೆ ಭೇಟಿ ನೀಡಿದ್ದ ಡಿವೈಎಸ್ಪಿಯವರು, ದೂರುದಾರ ಲಕ್ಷ್ಮಣ ವಾಲೀಕಾರ ಅವರಿಂದ ಅಹವಾಲು ಆಲಿಸಿದರು. ವಿವಾದಿತ ಜಾಗದ ಅತಿಕ್ರಮಣ ಹಾಗೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ತಮ್ಮ ಕುಟುಂಬಕ್ಕೆ ಸೇರಿದ ಜಮೀನನ್ನು ಕಬಳಿಸಲಾಗಿದೆ. ಈ ಬಗ್ಗೆ ಎಸ್‌ಸಿ, ಎಸ್ಟಿ ಆಯೋಗದಿಂದ ಆದೇಶವಾಗಿದ್ದರೂ ಜಮೀನು ಮರಳಿಸುವ ಕೆಲಸ ಆಗುತ್ತಿಲ್ಲ. ತಮಗೆ ಅನ್ಯಾಯವಾಗಿದೆ ಎಂಬುದನ್ನು ದೂರುದಾರ ವಾಲೀಕಾರ ಡಿವೈಎಸ್ಪಿ ಅವರ ಗಮನಕ್ಕೆ ತಂದರು. ಈ ಸಂದರ್ಭದಲ್ಲಿ ಪಿಎಸ್ವೈ ಮಲ್ಲಪ್ಪ ಮಡ್ಡಿ, ವಾಲ್ಮೀಕಿ ಸಮಾಜದ ಅಧ್ಯಕ್ಷ ಬಲಭೀಮ ನಾಯ್ಕಮಕ್ಕಳು, ಎಪಿಎಂಸಿ ಉಪಾಧ್ಯಕ್ಷ ಹಣಮಂತ ನಾಯ್ಕಮಕ್ಕಳು, ಗದ್ದೆಪ್ಪ ಕೋಳೂರ ಇದ್ದರು.