ವಿಜಯಪುರ: ಮದ್ಯದಂಗಡಿಗೆ ನುಗ್ಗಿರುವ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಮದ್ಯದ ಬಾಟಲಿ ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ಜಿಲ್ಲೆಯ ಕೊಲ್ಹಾರದಲ್ಲಿ ನಡೆದಿದೆ.
ಕೊಲ್ಹಾರ ತಾಲೂಕಿನ ಕೂಡಗಿ ರೈಲು ನಿಲ್ದಾಣ ಬಳಿಯ ಅರ್ಜುನ ಈಳಗೇರಿ ಅವರಿಗೆ ಸೇರಿದ ಕೆ.ರಾಮಯ್ಯ ಮದ್ಯದಂಗಡಿಗೆ, ರಾತ್ರಿ ನುಗ್ಗಿರುವ ಕಳ್ಳರು ಮೊದಲು ಅಂಗಡಿಯ ಶೆಟರ್ ಮುರಿದು ಒಳ ನುಗ್ಗಿ ನಂತರ ಅಂಗಡಿಯಲ್ಲಿದ್ದ ಸಿಸಿ ಕ್ಯಾಮರಾ ಒಡೆದಿದ್ದಾರೆ. ನಂತರ ಅಂಗಡಿಯಲ್ಲಿ ಸಂಗ್ರಹಿಸಿಟ್ಟಿದ್ದ ದುಬಾರಿ ಬೆಲೆ ಸುಮಾರು ಎರಡು ಲಕ್ಷ ರೂ. ಮೌಲ್ಯದ ಮದ್ಯದ ಬಾಟಲಿಗಳ ಜೊತೆಗೆ ಅವರೆ ಒಡೆದ ಸಿಸಿ ಕ್ಯಾಮರಾಗಳನ್ನು ಕಳ್ಳತನ ಮಾಡಿದ್ದಾರೆ.
ಬೆಳಗ್ಗೆ ರೈಲು ನಿಲ್ದಾಣದ ಕಡೆಗೆ ಹೋಗುತ್ತಿದ್ದ ಜನ ಮದ್ಯದಂಗಡಿ ಕಳ್ಳತನವಾಗಿರುವ ಕುರಿತು ಎನ್ಟಿಪಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿದ್ದಾರೆ.