ವಿಜಯಪುರ: ಮೊಬೈಲ್‌ನಿಂದ ಮಿಸ್ಡ್ ಕಾಲ್ ಹೋಗಿದ್ದಕ್ಕೆ ಒಬ್ಬ ವ್ಯಕ್ತಿಯ ಕೊಲೆ ನಡೆದ ಘಟನೆ ತಾಳಿಕೋಟೆಯ ಮೂಕಿಹಾಳ ಗ್ರಾಮದಲ್ಲಿ ಸಂಭವಿಸಿದೆ.
ಮಹಾರಾಷ್ಟ್ರದ ರಾಯಘಡ ಜಿಲ್ಲೆ ಮಾನಗಾಂವ ತಾಲೂಕಿನ ಪಾವಸುಳವಾಡಿ ಗ್ರಾಮದ ಸೋನು ಲಕ್ಷ್ಮಣ ಹೀಲಮ (35) ಎಂಬಾತ ಕೊಲೆಯಾಗಿದ್ದಾನೆ. ಗೋಪಾಲ ಮಾಧು ಜಾಧವ ಆರೋಪಿಯಾಗಿದ್ದು, ಈ ಬಗ್ಗೆ ಸೋನು ಪತ್ನಿ ಮೀನಾ ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದ್ದಿಲು ತಯಾರಿಸಲೆಂದು ಮಹಾರಾಷ್ಟ್ರದಿಂದ ಸೋನು ಕುಟುಂಬ ತಾಳಿಕೋಟೆಯ ಮೂಕಿಹಾಳ ಗ್ರಾಮಕ್ಕೆ ವಲಸೆ ಬಂದಿತ್ತು. ಇವರ ಜೊತೆಗೆ ಮಹಾರಾಷ್ಟ್ರದಿಂದ ಕೆಲಸಕ್ಕೆ ಬಂದ ಗೋಪಾಲ ಮಾಧು ಜಾಧವ ಕುಟುಂಬವು ವಲಸೆ ಬಂದಿದೆ.
ಮಾ. 17ರಂದು ರಾತ್ರಿ ಕೆಲಸ ಮುಗಿಸಿ ಮನೆಗೆ ಊಟಕ್ಕೆ ಬಂದ ಸಮಯದಲ್ಲಿ ಸೋನು ತನ್ನ ಸಂಬಂಧಿಕರಿಗೆ ಕರೆ ಮಾಡುವಾಗ ಆಕಸ್ಮಿಕವಾಗಿ ಕರೆ ಗೋಪಾಲ ಮಾಧು ಜಾಧವಗೆ ಹೋಗಿದೆ. ಈ ವೇಳೆ ಗೋಪಾಲ ತನಗೇಕೆ ಕರೆ ಮಾಡಿದ್ದೆ? ಎಂದು ಸೋನು ಜೊತೆಗೆ ಜಗಳ ತೆಗೆದು ಬಲವಾಗಿ ಹೊಡೆದು ಗಾಯಗೊಳಿಸಿದ್ದಾನೆ.
ಕೂಡಲೇ ಸೋನುನನ್ನು ತಾಳಿಕೋಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಸೋನು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Live Video: ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಯುವಕನ ರಕ್ಷಣೆ