ಮುದ್ದೇಬಿಹಾಳ: ತಾಲೂಕಿನ ಮುದ್ನಾಳ ಹಳ್ಳದ ತಾಂಡಾದಲ್ಲಿ ನ. 15ರಂದು ಕೂಲಿ ಕಾರ್ಮಿಕ ದಂಪತಿಯನ್ನು ಬರ್ಬರವಾಗಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಸರಿಗಿಡ ತಾಂಡಾದ ಮುತ್ತಣ್ಣ ಶೆಟ್ಟೆಪ್ಪ ರಾಠೋಡ ಹಾಗೂ ಲಕ್ಷ್ಮಣ್ ಶೆಟ್ಟೆಪ್ಪ ರಾಠೋಡ ಬಂಧಿತ ಆರೋಪಿಗಳು.
ವಿಶೇಷ ತಂಡ ರಚನೆ: ಸದರಿ ಪ್ರಕರಣದ ತನಿಖೆಯ ಕುರಿತು ಎಸ್ಪಿ ಅನುಪಮ್ ಅಗರವಾಲ್, ಹೆಚ್ಚುವರಿ ಎಸ್ಪಿ ಡಾ. ರಾಮ ಅರಸಿದ್ದಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಈ.ಶಾಂತವೀರ, ಸಿಪಿಐ ಆನಂದ ವಾಘಮೋಡೆ, ಮುದ್ದೇಬಿಹಾಳ ಪಿಎಸ್ಐ ಮಲ್ಲಪ್ಪ ಮಡ್ಡಿ, ಆರ್.ಎಸ್.ಪಾಟೀಲ್, ಎಂ.ಎ.ಮಠಪತಿ, ಎಸ್.ಎಲ್.ಹತ್ತರಕಿಹಾಳ, ಎಸ್.ಬಿ.ಬಿರಾದಾರ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಕೃತ್ಯ ನಡೆದ ಸ್ಥಳದಲ್ಲಿ ಆರೋಪಿತರ ಬಗ್ಗೆ ಯಾವುದೇ ಸುಳಿವು ಸಿಗದೇ ಇದ್ದರೂ ತಮ್ಮ ಚಾಣಾಕ್ಷತನದಿಂದ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾದ ತಂಡಕ್ಕೆ ಎಸ್ಪಿಯವರು ನಗದು ಬಹುಮಾನ ಘೋಷಿಸಿದ್ದಾರೆ.
ಘಟನೆ ಹಿನ್ನೆಲೆ: ಹುಣಸಗಿ ತಾಲೂಕಿನ ಬಸರಿಗಿಡದ ತಾಂಡಾದ ಶಾಂತಿಲಾಲ್ ದೇವಲಪ್ಪ ರಾಠೋಡ (50) ಹಾಗೂ ಆತನ ಪತ್ನಿ ರುಕ್ಮಿಣಿ ಶಾಂತಿಲಾಲ್ ರಾಠೋಡ(45) ಮುದ್ನಾಳ ಹಳ್ಳದ ತಾಂಡಾದಲ್ಲಿ ಕೂಲಿಗೆಂದು ಯಂಕನಗೌಡ ಪಾಟೀಲ ಎಂಬುವರ ಹೊಲದಲ್ಲಿ ಶೆಡ್ ಹಾಕಿಕೊಂಡು ವಾಸವಾಗಿದ್ದರು. ಈ ದಂಪತಿಯನ್ನು ನ. 15ರಂದು ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು. ಪ್ರಕರಣದಲ್ಲಿ ಮೃತಪಟ್ಟಿರುವ ಶಾಂತಿಲಾಲ್ ರಾಠೋಡ ಹಾಗೂ ಆರೋಪಿಗಳ ತಂದೆ ಶೆಟ್ಟೆಪ್ಪ ರಾಠೋಡ ದಾಯಾದಿಗಳಾಗಿದ್ದು, ಆಸ್ತಿ ಹಂಚಿಕೆಯಲ್ಲಿ ಪರಸ್ಪರ ಎರಡು ಕುಟುಂಬಗಳ ಮಧ್ಯೆ ಮನಸ್ತಾಪ ಇತ್ತು ಎನ್ನಲಾಗಿದೆ. ಅಲ್ಲದೆ ಆಸ್ತಿಯಲ್ಲಿ ಪಾಲು ಕೊಡದೆ ಇರುವುದರಿಂದ ಆರೋಪಿತರು ಶಾಂತಿಲಾಲ್ ರಾಠೋಡ ವಿರುದ್ಧ ನ್ಯಾಯಾಲಯದಲ್ಲೂ ದಾವೆ ಹೂಡಿದ್ದರು.
ಆಸ್ತಿಯಲ್ಲಿ ತಮಗೆ ಬರಬೇಕಿದ್ದ ಜಮೀನಿನಲ್ಲಿ ಎರಡು ಎಕರೆ ಮಾರಾಟಕ್ಕೆ ಮುಂದಾಗಿದ್ದ ಶಾಂತಿಲಾಲ್ ರಾಠೋಡ ದಂಪತಿಯನ್ನು ಅಣ್ಣ ತಮ್ಮಂದಿರಿಬ್ಬರೂ ಮೋಟರ್ ಸೈಕಲ್ನಲ್ಲಿ ಬಂದು ಕೊಲೆಗೈದು ಪರಾರಿಯಾಗಿದ್ದರು ಎನ್ನಲಾಗಿದೆ.