ಮುದ್ದೇಬಿಹಾಳ: ತಾಲೂಕಿನ ಕಾಳಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸನ್ 2018-19ರಲ್ಲಿ ಸ್ವಚ್ಛ ಆರೋಗ್ಯ ಕೇಂದ್ರವೆಂದು ಕಾಯಕಲ್ಪ ಪ್ರಶಸ್ತಿ ಬಂದಿದ್ದರೂ ಇಲ್ಲಿನ ಆರೋಗ್ಯ ಕವಚ(108) ಆಂಬ್ಯುಲೆನ್ಸ್ ಅನಾರೋಗ್ಯದಿಂದ ಆಸ್ಪತ್ರೆಯ ಮೂಲೆಯಲ್ಲಿ ನಿಂತುಕೊಂಡಿದೆ.
ಸಮುದಾಯ ಆರೋಗ್ಯ ಕೇಂದ್ರದ ಕಾಳಗಿಯಲ್ಲಿ ಈಗಾಗಲೇ ಇರುವ ಆಂಬ್ಯುಲೆನ್ಸ್ಗೆ ಸುಸಜ್ಜಿತ ಟೈರ್ ಇಲ್ಲದ ಕಾರಣ ತುರ್ತು ಪರಿಸ್ಥಿತಿಯಲ್ಲಿ ಎಲ್ಲಿಗಾದರೂ ಕಳಿಸಲು ಹಿಂದೇಟು ಹಾಕುವಂತಾಗಿದೆ. ಕಳೆದ ವಾರದಿಂದ ಅಂಬ್ಯುಲೆನ್ಸ್ ಓಡಾಟ ಇಲ್ಲದೆ ಆಂಬ್ಯುಲೆನ್ಸ್ ನಿಂತಲ್ಲಿಯೇ ನಿಂತಿದೆ.
ಮಹಾಂತೇಶ ಗಂಜಿಹಾಳ ಮಾತನಾಡಿ, ಏಳೆಂಟು ತಿಂಗಳ ಹಿಂದೆ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಅವರ ಹತ್ತಿರ ಗ್ರಾಮದ ಹಿರಿಯರೆಲ್ಲ ಸೇರಿ ಈ ವಿಷಯದ ಬಗ್ಗೆ ತಿಳಿಸಿದಾಗ ಶಾಸಕರು ಸ್ಪಂದಿಸಿ ಮೇಲಾಧಿಕಾರಿಗಳ ಜೊತೆ ಮಾತಾಡಿದರೂ ಸಹ ಅದೇ ಹಳೆಯ ಕುಂಟು ನೆಪಗಳನ್ನು ಹೇಳುತ್ತಿದ್ದಾರೆ. ಈ ಬಗ್ಗೆ 108 ಆರೋಗ್ಯ ಕವಚ ವಾಹನದ ವ್ಯವಸ್ಥಾಪಕರು ಅಹಿತಕರ ಘಟನೆ ನಡೆಯುವ ಮುಂಚೆ ಎಚ್ಚೆತ್ತು ಬೇಗನೆ ಉತ್ತಮ ಸ್ಥಿತಿಯಲ್ಲಿರುವ ಆಂಬ್ಯುಲೆನ್ಸ್ ನೀಡಿ ಜನರ ಆರೋಗ್ಯದ ಕುರಿತು ಕಾಳಜಿ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕರ್ನಾಟಕ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಹುಸೇನ್ ಮುಲ್ಲಾ, ಗ್ರಾಮದ ಮುಖಂಡ ಮಹಾಂತೇಶ ಕಾಳಗಿ ಮಾತನಾಡಿ, ಹಲವಾರು ವರ್ಷಗಳಿಂದ ನಮ್ಮ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರವನ್ನು ಕಡೆಗಣಿಸಲಾಗುತ್ತಿದೆ. ಆರೋಗ್ಯ ಇಲಾಖೆಯಿಂದ ಹಳೆಯ ಆಂಬ್ಯುಲೆನ್ಸ್ ನೀಡಿದರೆ ಗುತ್ತಿಗೆ ಆಧಾರದಲ್ಲಿ ಇರುವ 108 ಆರೋಗ್ಯ ಕವಚ ಒದಗಿಸುವ ಜಿವಿಕೆ ಸಂಸ್ಥೆಯವರದ್ದು ಹಳೆಯ ಆಂಬ್ಯುಲೆನ್ಸ್ ಇದೆ. ಎಮರ್ಜೆನ್ಸಿ ಎಂದು ಪೇಶೆಂಟ್ ಬಂದರೆ ಬೇರೆ ದೊಡ್ಡ ಆಸ್ಪತ್ರೆಗೆ ಕರೆದೊಯ್ಯಲಾಗದೆ ರೋಗಿ ಡೆತ್ ಆಗುವ ಸಾಧ್ಯತೆ ಹೆಚ್ಚಾಗಿದೆ. ಕೂಡಲೇ ನಮ್ಮ ಆಸ್ಪತ್ರೆಗೆ ಬಂದಿರುವ ಹೊಸ ಆಂಬ್ಯುಲೆನ್ಸ್ ಒದಗಿಸುವಂತೆ ಒತ್ತಾಯಿಸಿದ್ದಾರೆ.