ಮುದ್ದೇಬಿಹಾಳ: ಲಾಕ್‌ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಕೂಲಿ ಕಾರ್ಮಿಕರಿಗೆ ತಾಲೂಕಿನ ಕವಡಿಮಟ್ಟಿ ಗ್ರಾ.ಪಂ. ಕೆಲಸ ಕೊಟ್ಟು ಹಣ ನೀಡಿ ನೆರವಾಗಿ ಮಾನವೀಯತೆ ಮೆರೆದಿದೆ.
ನೆರೆ ರಾಜ್ಯ ಗೋವಾಕ್ಕೆ ಕೆಲಸ ಅರಸಿ ಹೋಗಿದ್ದ ಕೂಲಿ ಕಾರ್ಮಿಕರು ಅನ್ನ,ನೀರು ಇಲ್ಲದೇ ಕಷ್ಟ ಅನುಭವಿಸಿ ನಗರಕ್ಕೆ ಬಂದಿದ್ದಾರೆ. ಇವರ ಕಷ್ಟ ನೋಡಿದ ಕವಡಿಮಟ್ಟಿ ಗ್ರಾ.ಪಂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನೀಡಿ ನೆರವಾಗಿದ್ದಾರೆ. ದಿನಕ್ಕೆ ಒಬ್ಬರಿಗೆ 275 ರೂ. ಕೂಲಿ ನೀಡುತ್ತಿದ್ದು, ನೀರು - ನೆರಳಿನ ವ್ಯವಸ್ಥೆ ಮಾಡಿದ್ದಾರೆ ಎಂದು ಕೂಲಿಕಾರರು ಸಂತಸ ವ್ಯಕ್ತಪಡಿಸಿದರು.
ಕೇಂದ್ರ ಸರಕಾರ ದೇಶದ್ಯಾಂತ 40 ದಿನಗಳ ಲಾಕ್‌ಡೌನ್ ಘೋಷಣೆ ಮಾಡಿದಾಗಿನಿಂದ ಕೆಲಸವಿಲ್ಲದೇ ಚಿಂತಿತರಾಗಿದ್ದ ಕೂಲಿಕಾರ್ಮಿಕರಿಗೆ ಏ.30 ರಿಂದಲೇ ಅಂದಾಜು 2 ಲಕ್ಷ ರೂ. ಅನುದಾನದಲ್ಲಿ ಕವಡಿಮಟ್ಟಿಯ ಸರಕಾರಿ ಗುಡ್ಡದಲ್ಲಿ ಇಂಗುಗುಂಡಿಯ ಕೆಲಸವನ್ನು 58 ಜನ ಕೂಲಿ ಕಾರ್ಮಿಕರಿಂದ ಕೆಲಸ ಮಾಡಿಸುತ್ತಿದ್ದಾರೆ. ಕಾರ್ಮಿಕರ ಮಧ್ಯೆ ಸಾಮಾಜಿಕ ಅಂತರ, ಅವರಿಗೆ ಕುಡಿವ ನೀರು, ನೆರಳಿನ ವ್ಯವಸ್ಥೆ ಮಾಡಲಾಗಿದೆ.
ಕಾಲೇಜು ಕಲಿಯುವ ಆಸೆ ಕೈ ಬಿಟ್ಟು ಕೂಲಿಗೆ ಬಂದ ಯುವತಿ:
ತಂದೆಯನ್ನು ಕಳೆದುಕೊಂಡು ತಾಯಿ, ಸಹೋದರನೊಂದಿಗೆ ಜೀವನ ನಡೆಸುತ್ತಿರುವ ಕವಡಿಮಟ್ಟಿ ಗ್ರಾಮದ ರೇಖಾ ಬಂಡಿವಡ್ಡರ್, ಬಡತನದಿಂದಾಗಿ ಹಾಗೂ ಬೇರೆ ಎಲ್ಲಿಯೂ ಕೆಲಸ ಸಿಗದೇ ಇದ್ದುದ್ದರಿಂದ ಕೂಲಿ ಕೆಲಸಕ್ಕೆ ಬಂದಿದ್ದಳು. ಪಿಯುಸಿ ಓದಿರುವ ರೇಖಾ ಪದವಿ ಓದಿ ಕಂಡಕ್ಟರ್ ಆಗಬೇಕೆಂಬ ಆಸೆ ಹೊಂದಿದ್ದರೂ ಕಲಿಸಲು ತಮ್ಮ ತಾಯಿಯ ಬಳಿ ಹಣ ಇರಲಿಲ್ಲ. ನನಗೆ ಹೊಲಿಗೆ ಬರುತ್ತಿದ್ದು ಮಷಿನ್ ಕೊಡಿಸಿದರೆ ನಮ್ಮ ಕುಟುಂಬದ ಉಪ ಜೀವನವನ್ನು ಹೇಗೋ ಸಾಗಿಸುತ್ತೇನೆ ಎಂದಳು.
ಗುಳೇ ಹೋದವರಿಗೆ ಎನ್‌ಆರ್‌ಇಜಿ ಅಡಿ 10 ಕೃಷಿ ಹೊಂಡ, 200 ಬದು ನಿರ್ಮಾಣ, ಪ್ರತಿ ಗ್ರಾಮದಲ್ಲಿ 50 ದನದ ಶೆಡ್‌ಗಳನ್ನು ನಿರ್ಮಾಣ ಮಾಡುವ ಗುರಿ ನೀಡಿದ್ದಾರೆ. ಅದರಂತೆ ಎಲ್ಲ ಪಂಚಾಯಿತಿಗಳಲ್ಲಿ ಕೆಲಸ ಮಾಡಿಸುತ್ತಿದ್ದೇವೆ. ಜನರಿಗೆ ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ಅರಿವು ಮೂಡಿಸುವ ಜೊತೆಗೆ ಪಂಚಾಯಿತಿಗೆ ಕೆಲಸ ಕೇಳಿಕೊಂಡು ಬಂದ ಕೂಲಿಕಾರ್ಮಿಕರಿಗೆ ಯಾರಿಗೂ ಇಲ್ಲ ಎನ್ನದೇ ಕೆಲಸ ನೀಡುವಂತೆ ಸೂಚಿಸಿದ್ದೇವೆ ಎಂದು ಸಿಇಒ ಶಶಿಕಾಂತ ಶಿವಪೂರೆ ತಿಳಿಸಿದರು.