ವಿಜಯಪುರ : ಕಿರಾಣಿ ಅಂಗಡಿಯಲ್ಲಿ ಗುಟ್ಕಾ ಮಾರಾಟ ಮಾಡುತ್ತಿರೋ ಸುದ್ದಿ ಪ್ರಸಾರ ಮಾಡುವುದಾಗಿ ಹೆದರಿಸಿ ಹಣ ವಸೂಲಿ ಮಾಡುತ್ತಿದ್ದ ಪತ್ರಕರ್ತನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಸ್ಥಳೀಯ ಸುದ್ದಿ ವಾಹಿನಿಯೊಂದರ ವರದಿಗಾರ ಇರ್ಫಾನ್ ಶಮಶುದ್ಧೀನ ಬೀಳಗಿ ಬಂಧಿತ ಆರೋಪಿ. ಬಬಲೇಶ್ವರ ತಾಲೂಕಿನ ದೇವರಗೆಣ್ಣೂರಿನ ಸೋಮಪ್ಪ ಪೂಜಾರಿ ಎಂಬುವರ ಕಿರಾಣಿ ಅಂಗಡಿಗೆ ಹೋಗಿದ್ದ ಇರ್ಫಾನ್, ಅಂಗಡಿಯಲ್ಲಿ ಗುಟ್ಕಾ ಮಾರುತ್ತಿರುವ ಸುದ್ದಿಯನ್ನು ಟಿವಿಯಲ್ಲಿ ಪ್ರಸಾರ ಮಾಡುವುದಾಗಿ ಹಣ ವಸೂಲಿ ಮಾಡಿದ್ದ.
ಈ ವಿಷಯ ಯಾರಿಗಾದರೂ ಹೇಳಿದರೆ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದ. ಈ ಸಂಬಂಧ ಅಂಗಡಿ ಮಾಲೀಕ ಸೋಮಪ್ಪ ಪೂಜಾರಿ ನೀಡಿದ ದೂರಿನನ್ವಯ ಬಬಲೇಶ್ವರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.