ವಿಜಯಪುರ: ಸಿಂದಗಿ ಉಪಚುನಾವಣೆಗೆ ನಮ್ಮ ಪಕ್ಷದಿಂದ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿರುವುದು ಕಾಂಗ್ರೆಸ್ ಬಣ್ಣ ಬಯಲು ಮಾಡಲು. ಅವರ ಕೀಳುಮಟ್ಟದ ರಾಜಕೀಯ ನಿಲ್ಲಬೇಕು ಎಂದು ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಜೆಡಿಎಸ್, ಬಿಜೆಪಿಯ ಬಿ ಟೀಮ್, ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿರುವುದು ಬಿಜೆಪಿಗೆ ಗೆಲ್ಲಲು ಸಹಾಯವಾಗಿದೆ ಎಂದು ಆರೋಪಿಸಿದ್ದಾರೆ. ನಮ್ಮ ಪಕ್ಷದ ಟಿಕೆಟ್ಅನ್ನು ಅವರನ್ನು ಕೇಳಿ ಕೊಡಬೇಕಾ? ಎಂದು ಪ್ರಶ್ನಿಸಿದರು.
ನಾನು ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿರುವುದು ಕಾಂಗ್ರೆಸ್ ಬಣ್ಣ ಬಯಲು ಮಾಡಲು. ಅವರ ಕೀಳುಮಟ್ಟದ ರಾಜಕೀಯ ನಿಲ್ಲಬೇಕು. ಬಿಜೆಪಿಯಂತ ಕೆಟ್ಟ ಸರ್ಕಾರ ಬರಲು ಕಾಂಗ್ರೆಸ್ ನಾಯಕರೇ ಕಾರಣ. 2018ರಲ್ಲಿ ರಾಹುಲ್ ಗಾಂಧಿ ಮೂಲಕ ಜೆಡಿಎಸ್ ಬಿಜೆಪಿಯ ಬಿ ಟೀಮ್ ಎಂದು ಅಪ್ರಚಾರ ಮಾಡಿಸಿದ್ದರು. ಇದರ ಜತೆ ಅಧಿಕಾರಿಗಳು, ಧರ್ಮ ಗುರುಗಳನ್ನು ದುರುಪಯೋಗ ಪಡಿಸಿಕೊಂಡರು. ನಾನು ಕೆಲಸಕ್ಕೆ ಬರದೇ ಇರುವವರನ್ನು ಅಭ್ಯರ್ಥಿಯಾಗಿ ಮಾಡಿಲ್ಲ. ನಾಜಿಯಾ ಅಂಗಡಿ ವಿದ್ಯಾವಂತೆ ಪದವೀಧರೆ. ಚುನಾವಣೆಯಲ್ಲಿ ಗೆಲ್ಲಲು ಸುಶಿಕ್ಷಿತರಿಗೆ ಟಿಕೆಟ್ ನೀಡಿದ್ದೇನೆ ಎಂದು ಸಮರ್ಥಿಸಿಕೊಂಡರು.
ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ ಅಶೋಕ್ ಮನಗೂಳಿ
ಇದೇ ವೇಳೆ ಸಾಂಕೇತಿಕವಾಗಿ ಪಕ್ಷದ ಬಿ ಫಾರ್ಮ್ ಇಲ್ಲದೇ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ನಾಮಪತ್ರ ಸಲ್ಲಿಸಿ ಮಾತನಾಡಿ, ನಾಳೆ ಮೆರವಣಿಗೆ ಮೂಲಕ ತಹಶಿಲ್ದಾರ್ ಕಚೇರಿಗೆ ಆಗಮಿಸಿ ಅಧಿಕೃತವಾಗಿ ನಾಮಪತ್ರ ಸಲ್ಲಿಸಲಿದ್ದೇನೆ. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ ಎಂದರು.
ನಾಳೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ ಸಹ ನಾಮಪತ್ರ ಸಲ್ಲಿಸಲಿದ್ದಾರೆ.