ಮುದ್ದೇಬಿಹಾಳ (ವಿಜಯಪುರ): ರಾಜ್ಯ ಸರ್ಕಾರ ಇತ್ತೀಚಿನ ದಿನಗಳಲ್ಲಿ ತಿದ್ದುಪಡಿ ಮಾಡಿರುವ ವಿವಿಧ ಕಾಯ್ದೆಗಳ ಜಾರಿ ಖಂಡಿಸಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಟ್ಟಣದ ತಹಶಿಲ್ದಾರ್ ಕಚೇರಿಗೆ ಆಗಮಿಸಿದ ಜೆಡಿಎಸ್ ಕಾರ್ಯಕರ್ತರು, ರಾಜ್ಯದಲ್ಲಿ ಜಾರಿಗೆ ತಂದಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ, ಕಾರ್ಮಿಕ ಕಾಯ್ದೆ ತಿದ್ದುಪಡಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಜೆಡಿಎಸ್ ಮಹಿಳಾ ಘಟಕದ ರಾಜ್ಯ ಕಾರ್ಯಾಧ್ಯಕ್ಷೆ ಮಂಗಳಾದೇವಿ ಬಿರಾದಾರ, ರಾಜ್ಯ ಸರ್ಕಾರವು ಭೂ ಸುಧಾರಣೆ ಕಾಯ್ದೆ, ಕಾರ್ಮಿಕ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ದುರಾಡಳಿತ ನಡೆಸಿದೆ. ಅತಿವೃಷ್ಟಿಯಿಂದಾಗಿ ರಾಜ್ಯದ ಜನರು ಸಂಕಷ್ಟದಲ್ಲಿದ್ದಾರೆ. ಅವರ ನೆರವಿಗೆ ಧಾವಿಸಬೇಕಿದ್ದ ಸರ್ಕಾರ, ರೈತರು ಮತ್ತು ಕಾರ್ಮಿಕರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ.
ಕುಮಾರಸ್ವಾಮಿ ಸಿಎಂ ಆಗಿದ್ದಾಗ ಯಡಿಯೂರಪ್ಪನವರು ವಿಧಾನಸೌಧದ ಮುಂಭಾಗದಲ್ಲಿ ರೈತರ ಸಾಲಮನ್ನಾ ಮಾಡಿ ಎಂದು ಪ್ರತಿಭಟನೆ ನಡೆಸಿದ್ದರು. ಅದನ್ನು ಮನಗಂಡು ಬಿಜೆಪಿ ಆಡಳಿತ ನಡೆಸಬೇಕಿದೆ. ಭೂ ಸುಧಾರಣೆ ಕಾಯ್ದೆ ಮೂಲಕ ಕೆಳವರ್ಗದ ಜನರು ಆಸ್ತಿ ಖರೀದಿ ಮಾಡುವುದಕ್ಕೆ ಆಗುತ್ತಿಲ್ಲ. ಅದೆಲ್ಲವೂ ಉಳ್ಳವರ ಪಾಲಾಗುತ್ತಿದೆ. ಎಪಿಎಂಸಿ ತಿದ್ದುಪಡಿ ಮುಖಾಂತರ ಎಪಿಎಂಸಿ ಒಳಗಡೆ ವಹಿವಾಟು ಮಾಡುವ ಹಾಗೂ ಎಪಿಎಂಸಿ ಹೊರಗಡೆ ಖರೀದಿ ಮಾಡುವವರ ಮಧ್ಯೆ ತಾರತಮ್ಯ ತಂದು ರೈತರನ್ನು ಸಂಕಷ್ಟಕ್ಕೆ ದೂಡಿದೆ ಎಂದು ಆರೋಪಿಸಿದರು.
ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ರಸೂಲ್ ದೇಸಾಯಿ ಮಾತನಾಡಿ, ಬಿಜೆಪಿ ಸರ್ಕಾರ ದಿನೇ ದಿನೇ ಪೆಟ್ರೋಲ್-ಡೀಸೆಲ್ ಬೆಲೆಯನ್ನು ಹೆಚ್ಚಿಸುತ್ತಿದೆ. ವಿವಿಧ ಕಾಯ್ದೆಗಳನ್ನು ತಿದ್ದುಪಡಿ ಮಾಡುವ ಮೂಲಕ ಜನ ವಿರೋಧಿಯಾಗಿದೆ. ಈ ಸರ್ಕಾರವನ್ನು ಜನರು ಕಿತ್ತೆಸೆಯಬೇಕು ಎಂದರು.