ವಿಜಯಪುರ: ರಾಜಕೀಯ ಉದ್ದೇಶದಿಂದ ಕನ್ನಡ ಬಾವುಟ ಸುಟ್ಟು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುತ್ತಿರುವ ಮಹಾರಾಷ್ಟ್ರದ ಶಿವಸೇನೆ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಜಯ ಕರ್ನಾಟಕ ರಕ್ಷಣಾ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಉದ್ಧವ್ ಠಾಕ್ರೆ ಭಾವಚಿತ್ರಕ್ಕೆ ಅಪಮಾನ ಮಾಡುವ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕಿದರು. ರಾಜಕೀಯವಾಗಿ ಶಿವಸೇನೆ ಬೆಳಗಾವಿ ಗಡಿ ವಿಚಾರದಲ್ಲಿ ಕರ್ನಾಟಕದೊಂದಿಗೆ ಪದೆ ಪದೇ ಪುಂಡಾಟಿಕೆ ನಡೆಸುತ್ತಿದೆ. ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚುವುದರ ಮೂಲಕ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುತ್ತಿದೆ. ಶಿವಸೇನೆ ಕಾರ್ಯಕರ್ತರ ವಿರುದ್ಧ ರಾಜ್ಯ ಸರ್ಕಾರ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಬೆಳಗಾವಿ ಭಾಗದಲ್ಲಿ ಕನ್ನಡಿಗರು ಮಾರಾಠಿಗರು ಶಾಂತಿಯುತವಾಗಿ ಬಾಳುತ್ತಿದ್ದು, ಶಿವಸೇನೆ ಕಾರ್ಯಕರ್ತರಿಂದ ಪುಂಡಾಟಿಕೆಯ ವರ್ತನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿವೆ. ಇಂತಹ ಕೃತ್ಯ ನಡೆಸುವವರನ್ನು ತಕ್ಷಣವೇ ಬಂಧಿಸುವಂತೆ ಕೋರಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.