ವಿಜಯಪುರ: ಆಲಮಟ್ಟಿ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದ್ದು, ಅದರ ಅನುಗುಣವಾಗಿ ಜಲಾಶಯದಿಂದ ನೀರನ್ನು ನದಿಗೆ ಬಿಡಲಾಗುತ್ತಿದೆ.
ಕಳೆದ ಮೂರು ದಿನಗಳಲ್ಲಿ ಹೊರಹರಿವಿನಲ್ಲಿ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿತ್ತು. ಇಂದು ಮತ್ತೆ ಹೊರ ಹರಿವು ಹೆಚ್ಚಳ ಮಾಡಲಾಗಿದೆ. 519.03 ಮೀಟರ್ ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ. 113.432 ಟಿಎಂಸಿ ನೀರು ಸಂಗ್ರಹಿಸಲಾಗಿದೆ. ಜಲಾಶಯದ ನೀರು ಸಂಗ್ರಹ ಸಾಮರ್ಥ್ಯ 123.081 ಟಿಎಂಸಿ ಇದ್ದು, 1,01,932 ಕ್ಯೂಸೆಕ್ ನೀರು ಜಲಾಶಯಕ್ಕೆ ಒಳಹರಿವು ರೂಪದಲ್ಲಿ ಬರುತ್ತಿದೆ. ಇದೇ ಪ್ರಮಾಣದಲ್ಲಿ ಇಂದು ಬೆಳಗ್ಗೆಯಿಂದ 1,33,932 ಕ್ಯೂಸೆಕ್ ನೀರು ಹೊರ ಬಿಡಲಾಗಿದೆ. ಸದ್ಯದ ಒಳಹರಿವು, ಹೊರಹರಿವಿನ ಲೆಕ್ಕಾಚಾರದಂತೆ ಶೀಘ್ರವೇ ಜಲಾಶಯ ಸಂಪೂರ್ಣ ಭರ್ತಿಯಾಗಲಿದೆ.
ಬುಧವಾರದಿಂದ ಶುಕ್ರವಾರ ಬೆಳಗ್ಗೆಯವರೆಗೆ ಜಲಾಶಯದ ನೀರಿನ ಮಟ್ಟ ಅವಲೋಕಿಸಿದಾಗ ಒಳಹರಿವು ಲಕ್ಷ ಕ್ಯೂಸೆಕ್ ಮಟ್ಟದಲ್ಲಿ ಮಹಾರಾಷ್ಟ್ರದಿಂದ ಹರಿದು ಬಂದಿದೆ. ಮಂಗಳವಾರ 1,64,500 ಕ್ಯೂಸೆಕ್, ಬುಧವಾರ 1,74,115, ಗುರುವಾರ 1,12,447 ಕ್ಯೂಸೆಕ್ ನೀರು ಹರಿದು ಬಂದಿದೆ. ಆದರೆ ಹೊರಹರಿವು ಮಾತ್ರ ಸಾವಿರ ಕ್ಯೂಸೆಕ್ ಮಟ್ಟದಲ್ಲಿ ಜಲಾಶಯದಿಂದ ಹೊರ ಬಿಡಲಾಗಿದೆ.
ಮಂಗಳವಾರ, ಬುಧವಾರ ಜಲಾಶಯದಿಂದ 39 ಸಾವಿರ ಕ್ಯೂಸೆಕ್, ಗುರುವಾರ ಬೆಳಗ್ಗೆಯವರೆಗೆ 71,047 ಕ್ಯೂಸೆಕ್ ನೀರು ಹೊರ ಬಿಡಲಾಗಿದೆ. ಗುರುವಾರ ಸಂಜೆ 1,20,0000 ಕ್ಯೂಸೆಕ್ ಹಾಗೂ ಶುಕ್ರವಾರ ಬೆಳಗ್ಗೆ 8 ಗಂಟೆಯವರೆಗೆ 1,33,932 ಕ್ಯೂಸೆಕ್ ನೀರು ಜಲಾಶಯದಿಂದ ಹೊರ ಬಿಡಲಾಗಿದೆ. ಕಳೆದ ವರ್ಷ ಇದೇ ದಿನ ಜಲಾಶಯಕ್ಕೆ ದಾಖಲೆ ಪ್ರಮಾಣದ 5,88,745 ಕ್ಯೂಸೆಕ್ ನೀರು ಹೆಚ್ಚಳವಾದ ಕಾರಣ ಅದೇ ಪ್ರಮಾಣದಲ್ಲಿ 5,70,991 ಕ್ಯೂಸೆಕ್ ನೀರು ಹೊರ ಬಿಟ್ಟ ಕಾರಣ ನಾರಾಯಣಪುರ ಜಲಾಶಯದ ಹಿನ್ನೀರು ಹೆಚ್ಚಳವಾಗಿ ನದಿ ಪಾತ್ರದ ಗ್ರಾಮಗಳಿಗೆ ನೀರು ನುಗ್ಗಿ ಪ್ರವಾಹ ಪರಿಸ್ಥಿತಿ ಎದುರಾಗಿತ್ತು.
ಯಾವುದೇ ಬೆಳೆಹಾನಿ ಇಲ್ಲ: ಆಲಮಟ್ಟಿ ಜಲಾಶಯದಿಂದ ಆ. 8ರಂದು 2.20 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಹರಿಬಿಟ್ಟ ಹಿನ್ನೆಲೆಯಲ್ಲಿ ನಿಡಗುಂದಿ ತಾಲೂಕಿನ ಯಲಗೂರ ಗ್ರಾಮದ ಅಂದಾಜು 2 ಎಕರೆ ಮತ್ತು ಅರಳದಿನ್ನಿ ಗ್ರಾಮದ ಅಂದಾಜು 10 ಎಕರೆ ಪ್ರದೇಶದಲ್ಲಿ ನದಿಯ ನೀರು ಕೆಲವು ಗಂಟೆಗಳವೆರೆಗೆ ಮಾತ್ರ ನಿಂತಿದ್ದು, ನಂತರ ಕ್ರಮೇಣ ಕಡಿಮೆಯಾಗಿದೆ. ಹೀಗಾಗಿ ಯಾವುದೇ ಬೆಳೆ ಹಾನಿಯಾಗಿಲ್ಲ. ಹೆಸ್ಕಾಂ ಇಲಾಖೆಯ 12 ಕಂಬಗಳು ಹಾನಿಗೀಡಾಗಿವೆ. ಇದನ್ನು ಹೊರತುಪಡಿಸಿ ಪ್ರವಾಹದಿಂದ ಜಿಲ್ಲೆಯಲ್ಲಿ ಯಾವುದೇ ರೀತಿ ಹಾನಿಯಾಗಿಲ್ಲ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.