ವಿಜಯಪುರ: ಮಹಾರಾಷ್ಟ್ರದಲ್ಲಿ ಜಡಿ ಮಳೆಯಾಗುತ್ತಿದ್ದು ಜಿಲ್ಲೆಯ ಆಲಮಟ್ಟಿಯ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದ ಒಳಹರಿವು ಏಕಾಏಕಿ ಹೆಚ್ಚಳವಾಗಿದೆ. ಗುರುವಾರ ರಾತ್ರಿಯವರೆಗೆ 13,784 ಕ್ಯೂಸೆಕ್ ಒಳ ಹರಿವಿದ್ದು, ಇಂದು ಬೆಳಗ್ಗೆಯವರೆಗೆ 76,666 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ.
ಕಳೆದ ವರ್ಷ ಈ ಸಮಯದಲ್ಲಿ 9,910 ಸಾವಿರ ಕ್ಯೂಸೆಕ್ ನೀರಿನ ಒಳಹರಿವು ಇತ್ತು. ಇಂದು ಸಂಜೆ ವೇಳೆಗೆ ಒಳಹರಿವು ಪ್ರಮಾಣದಲ್ಲಿ ಮತ್ತಷ್ಟು ಏರಿಕೆ ಕಾಣುವ ಸಾಧ್ಯತೆಗಳಿವೆ. ಆಲಮಟ್ಟಿಗೆ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುವ ಕಾರಣ ಇಂದು ಸಂಜೆ 7 ಗಂಟೆಯ ವೇಳೆಗೆ 1 ಲಕ್ಷ ಕ್ಯೂಸೆಕ್ ನೀರಿನ ಒಳ ಹರಿವು ಹೆಚ್ಚಾಗಬಹುದು ಎಂದು ಕೆಬಿಜೆಎನ್ಎಲ್ ಮೂಲಗಳು ತಿಳಿಸಿವೆ.
ಮಹಾರಾಷ್ಟ್ರದ ಕೃಷ್ಣಾ ಕೊಳ್ಳ, ಕೊಯ್ನಾ ಜಲಾಶಯ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿಯವರೆಗೆ ಅತಿ ಹೆಚ್ಚು 251ಮೀ.ಮೀ, ಮಹಾಬಲೇಶ್ವರದಲ್ಲಿ 198 ಮೀ.ಮೀ, ಕೊಲಂವಾಡಿ ಭಾಗದಲ್ಲಿ 200ಮೀ.ಮೀ, ಪಟ್ಟೇಗಾಂವದಲ್ಲಿ 207 ಮಿಲಿ ಮೀಟರ್‌ನಷ್ಟು ಮಳೆಯಾಗಿದೆ.
ಇಂದು ಸಹ ಮಹಾರಾಷ್ಟ್ರ ಭಾಗದಲ್ಲಿ ಜೋರು ಮಳೆಯಾಗುವ ಸಾಧ್ಯತೆಯಿದೆ. 519.60 ಮೀಟರ್ ನೀರು ಸಂಗ್ರಹದ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ 509.60 ಮೀಟರ್ ನೀರಿದೆ. ಕಳೆದ ವರ್ಷ ಇದೇ ದಿನ 511.00 ಮೀಟರ್ ನೀರು ಸಂಗ್ರಹವಾಗಿತ್ತು.
ಇದನ್ನೂ ಓದಿ: ಶಿವಮೊಗ್ಗದ ಅಲೆಮಾರಿ ಕ್ಯಾಂಪ್ಗೆ ಕಾಲಿಡದ ಕೊರೊನಾ