ವಿಜಯಪುರ: ಕಾಡುಹಂದಿಗಳನ್ನು ಬೇಟೆಯಾಡುತ್ತಿದ್ದ 22 ಜನರನ್ನ ವಿಜಯಪುರ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ನಿನ್ನೆ ರಾತ್ರಿ ನಗರದ ಹೊರವಲಯದ ಅಲ್ಲಾಪುರ ತಾಂಡಾ ಬಳಿ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಿಡಿಕಲ್ ಮೂಲದ 22 ಜನರನ್ನು ಬಂಧಿಸಿದ್ದಾರೆ. ಬಂಧಿತರಿಂದ ಕಾಡುಹಂದಿ ಹಿಡಿಯಲು ಬಳಸುವ 23 ಬಲೆ, ಮೂರು ಕಾಡುಹಂದಿ, 4 ಬೇಟೆ ನಾಯಿ ಹಾಗೂ ಹಂದಿ ಸಾಗಿಸಲು ಬಳಸುತ್ತಿದ್ದ ವಾಹನ ವಶಪಡಿಸಿಕೊಂಡಿದ್ದಾರೆ.
ಇತ್ತೀಚಿಗೆ ಸಿಂದಗಿ ತಾಲೂಕಿನಲ್ಲಿ ಕಾಡು ಗಿಜಗ ಪ್ರಾಣಿಯನ್ನು ಬೇಟೆಯಾಡಿದ್ದ ತಂಡವೇ ಇದು ಎಂದು ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ. ಆರೋಪಿಗಳು ಕಾಡುಹಂದಿ ಮೊಂಸ ತಿನ್ನಲು ಬೇಟೆಯಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆದರೆ, ಇದರ ಹಿಂದೆ ಜಾಲವಿದ್ದು, ಮಾರಾಟಕ್ಕಾಗಿ ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿರುವ ಕುರಿತು ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ.