ವಿಜಯಪುರ:ಸಂವಿಧಾನ ವಿರೋಧಿ ಶಕ್ತಿಗಳು ಮನುವಾದ ಚರ್ಚೆ ನಡೆಸುತ್ತಿವೆ. ಈ ಬಗ್ಗೆ ಎಚ್ಚರ ಮತ್ತು ಜಾಗೃತಿ ಇರಬೇಕೆಂಬ ಸಿಎಂ ಆಫ್ ಕರ್ನಾಟಕ ಟ್ವೀಟರ್ ವಾಲ್‌ಗೆ ಸಂಬಂಧಿಸಿದಂತೆ ತೀವ್ರ ವಾಗ್ದಾಳಿ ನಡೆಸಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು, ಬಿಜೆಪಿ ಎಂದಾದರೂ ಮನು ವಾದದ ಬಗ್ಗೆ ಚರ್ಚೆ ಮಾಡುವುದಾಗಿ ಹೇಳಿಕೊಂಡಿದೆಯಾ? ಸಂವಿಧಾನ ಬದಲಾವಣೆ ಮಾಡುವ ಬಗ್ಗೆ ಮಾತನಾಡಿದೆಯಾ? ಅಷ್ಟಕ್ಕೂ ಸಂವಿಧಾನ ಬದಲು ಮಾಡಿದ್ದು ರಾಜೀವ ಗಾಂಧಿ ಅವಧಿಯಲ್ಲಿಯೇ ಎಂದು ಕಿಡಿ ಕಾರಿದರು.
ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ನಡೆದ ಶಂಖನಾದ ಅಭಿಯಾನದಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಸಿಎಂ ಅಧಿಕೃತ ಜಾಲತಾಣದಲ್ಲಿ ಇಂಥದ್ದೊಂದು ಪೋಸ್ಟ್ ಇದೆ. ಅಂದರೆ ಇದು ಸಿಎಂ ಅವರದ್ದೇ ಹೇಳಿಕೆ. ಹಾಗಾದರೆ ಸಂವಿಧಾನ ಬದಲು ಮಾಡಿದ್ದು ಯಾರು? ರಾಜೀವ್ ಗಾಂಧಿ ಅವರು ತಮ್ಮ ಭಾಷಣದಲ್ಲಿ ಸಂವಿಧಾನ ಬದಲು ಮಾಡಬೇಕು ಎನ್ನುತ್ತಿದ್ದರು. ಬಿಜೆಪಿ ಅಂದೂ ಆ ಬಗ್ಗೆ ಮಾತನಾಡಿಲ್ಲ ಎಂದರು.
ಸನಾತನದಿಂದಲೇ ಸಂವಿಧಾನದ ಉಳಿವು: ಸನಾತನ ಧರ್ಮ ನಾಶ ಮಾಡುವುದಾಗಿ ಹೇಳುತ್ತಿರುವವರಿಗೆ ತಕ್ಕ ಪಾಠ ಕಲಿಸಬೇಕು. ಸನಾತನ ಧರ್ಮ ಉಳಿದರೆ ಮಾತ್ರ ದೇಶ, ಸಂವಿಧಾನ ಉಳಿಯಲು ಸಾಧ್ಯ. ಹಿಂದುತ್ವ, ಸನಾತನ ಧರ್ಮದಿಂದ ಸಂವಿಧಾನ ಭದ್ರವಾಗಿದೆ. ಪಾಕಿಸ್ತಾನ ಕೂಡ ಇಂದು ಭಾರತಕ್ಕೆ ಸೇರ್ಪಡೆಯಾಗಲು ಹಾತೊರೆಯುತ್ತಿದೆ. ಈ ಹಿಂದೆ ಡಾ. ಅಂಬೇಡ್ಕರ್ ಸಹ ಪಾಕಿಸ್ತಾನ ಹಿಂದುಗಳಿಗೆ ಸುರಕ್ಷಿತವಲ್ಲ, ಮುಸ್ಲಿಂ ಧರ್ಮದಲ್ಲಿ ಭ್ರಾತೃತ್ವಕ್ಕೆ ಅವಕಾಶ ಇಲ್ಲ. ಹೀಗಾಗಿ ಭಾರತಕ್ಕೆ ಮರಳಬೇಕೆಂದಿದ್ದರು. ಹೀಗಾಗಿ ನಾವು 2024ರ ಬಳಿಕ ಗಣಪತಿಯನ್ನು ಪಾಕಿಸ್ತಾನದಲ್ಲಿಯೇ ಕೂರಿಸುವ ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.
ಡಾ. ಅಂಬೇಡ್ಕರ್ ಅವರ ವಿಚಾರಗಳಿಗೆ ಕಾಂಗ್ರೆಸ್ ಬೆಲೆ ಕೊಟ್ಟಿಲ್ಲ. ಸಂವಿಧಾನ ರಚಿಸುವ ಸಂದರ್ಭ ಸಹಕಾರ ಕೊಡಲಿಲ್ಲ. ಅವರು ತೀರಿಕೊಂಡಾಗ ಅಂತ್ಯಸಂಸ್ಕಾರಕ್ಕೆ ದೆಹಲಿಯಲ್ಲಿ ಎಕರೆ ಜಾಗೆ ಸಹ ಕೊಡಲಿಲ್ಲ. ಇಂದಿರಾಗಾಂಧಿ, ನೆಹರು, ರಾಜೀವ್ ಗಾಂಧಿ ಹೀಗೆ ಗಾಂಧಿ ಕುಟುಂಬಕ್ಕೆ ಸಾಕಷ್ಟು ಜಾಗ ಕೊಟ್ಟವರು ಅಂಬೇಡ್ಕರ್‌ಗೆ ಮಾತ್ರ ಕಳೇಬರ ಸಾಗಿಸಲು ಹಣಕಾಸಿನ ಸಹಾಯ ಕೂಡ ಕೊಡಲಿಲ್ಲ. ಕೊನೆಗೆ ಅಂಬೇಡ್ಕರ್ ಅವರು ಕಾರು ಮಾರಿ ವಿಮಾನದ ಖರ್ಚು ಭರಿಸಬೇಕಾಯಿತು. ಮುಂಬೈನ ಬೀಚ್‌ವೊಂದರಲ್ಲಿ ಅಂತ್ಯಸಂಸ್ಕಾರ ನೆರವೇರಿಸಬೇಕಾಯಿತು. ಕೊನೆಗೆ ಅವರಿಗೆ ಭಾರತ ರತ್ನ ಸಹ ಕಾಂಗ್ರೆಸ್‌ನವರು ಕೊಡಲಿಲ್ಲ. ಆದರೆ, ಬಿಜೆಪಿ ಡಾ. ಅಂಬೇಡ್ಕರ್ ಅವರ ಆಶಯಗಳಿಗೆ ಅನುಗುಣವಾಗಿದೆ. ದಲಿತರ ಮೀಸಲಾತಿ ಪ್ರಮಾಣ ಹೆಚ್ಚಿಸಿದೆ ಎಂದು ವಿವರಿಸಿದರು.
ಮಾಧ್ಯಮಗಳ ವಿರುದ್ಧ ವಾಗ್ದಾಳಿ: ಕೆಲವು ಮಾಧ್ಯಮಗಳಿಗೆ ಬಿಜೆಪಿ ಎಂದರೆ ಅಲರ್ಜಿ ಕೆಲವರು ನಿರೂಪಕರು ಕಮ್ಯುನಿಸ್ಟ್ ಸಿದ್ಧಾಂತಿಗಳಿದ್ದಾರೆ. ಹಿಂದುತ್ವ, ಬಿಜೆಪಿ, ಮೋದಿಯನ್ನೇ ಟೀಕಿಸುವ ಉದ್ಯೋಗ ಅವರದ್ದಾಗಿದೆ. ಮೋದಿಯನ್ನು ಯಾರಾದರೂ ಹೊಗಳಿದರೆ ಸಾಕು ಮೋದಿ ಮೀಡಿಯಾ ಎಂಬ ಬಣ್ಣ ಕಟ್ಟಲಾಗುತ್ತಿದೆ. ಇತ್ತೀಚೆಗೆ ಇಂಡಿಯಾ’ ಅಲ್ಲ ‘ಇಂಡಿ’ ಮೈತ್ರಿಕೂಟದ ಸಭೆಯಲ್ಲಿ 14 ಟಿವಿ ನಿರೂಪಕರ ಕಾರ್ಯಕ್ರಮ ನಿಷೇಧಿಸುವ ನಿರ್ಣಯ ಕೈಗೊಂಡಿದ್ದಾರೆ.
ಹೀಗಾಗಿ ಮೋದಿ, ಹಿಂದು ಹಾಗೂ ಹಿಂದುತ್ವ ವಿರೋಧಿಸುವವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಾವು ತಿರುಗೇಟು ನೀಡಬೇಕಿದೆ. ಅದ್ಯಾವನೋ ಪ್ರಕಾಶ್ ರಾಜ್ ಸನಾತನ ಧರ್ಮ ಎಂದರೆ ‘ಕಾಗೆ’ ಎಂದು ಟೀಕಿಸಿದರೆ ನೀವು ಅವನನ್ನು ‘ಹಂದಿ’ ಎಂದು ಟೀಕಿಸಬೇಕು. ಜಾಲತಾಣಗಳಲ್ಲಿ ಏಟಿಗೆ ಎದುರೇಟು ಕೊಡುವುದನ್ನು ಕಲಿಯಬೇಕೆಂದರು.
ಇತ್ತೀಚೆಗೆ ಕಾಂಗ್ರೆಸ್‌ನ ಸಚಿವರೊಬ್ಬರು ರೈತರು 5 ಲಕ್ಷ ರೂ. ಪರಿಹಾರಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಂದು ಹೇಳಿಕೆ ನೀಡಿದಾಗ, ನಾನೂ ಸಹ ಐದು ಲಕ್ಷ ಕೊಡುವೆ ಆತ್ಮಹತ್ಯೆ ಮಾಡಿಕೊ ಎಂದು ಎದಿರೇಟು ನೀಡಿದ್ದೇನು. ಅವನ ಪರವಾಗಿ ಬಂದ ನಾಯಕನಿಗೂ ನೀನು ಅವನಿಗಿಂತ ಶ್ರೀಮಂತ ಹೀಗಾಗಿ ನಿನಗೆ 10 ಕೋಟಿ ರೂ. ಪರಿಹಾರ ಕೊಡುವೆ. ಆತ್ಮಹತ್ಯೆ ಮಾಡಿಕೋ ಎಂದು ಟಾಂಗ್ ಕೊಟ್ಟೆ. ಹಾಗೆ ಯಾರೇ ಟೀಕಿಸಿದರೂ ಅವರಿಗೆ ಉತ್ತರ ಕೊಡುವುದನ್ನು ಕಲಿಯಬೇಕೆಂದು ಕಾರ್ಯಕರ್ತರಿಗೆ ತಿಳಿ ಹೇಳಿದರು.
ಇದನ್ನೂ ಓದಿ:ಗಣೇಶ ಮೂರ್ತಿ ನಾಲ್ಕು ಅಡಿ ಎತ್ತರ ಮೀರಬಾರದು ಎಂಬುದು ಹಾಸ್ಯಾಸ್ಪದ: ಕೇಂದ್ರ ಸಚಿವ ಜೋಶಿ